ಸಿದ್ದರಾಮಯ್ಯ ವಿರುದ್ಧ ಗೋ ಬ್ಯಾಕ್ ಚಳವಳಿ: ನರಸಪ್ಪ ದಂಡೋರ

ರಾಯಚೂರು: ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸುವಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ನಿರ್ಲಕ್ಷ್ಯ ವಹಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಅಕ್ಟೋಬರ್ 21 ಹಾಗೂ 22ರಂದು ಗೋಬ್ಯಾಕ್ ಚಳವಳಿ ಮಾಡಿ ಚಪ್ಪಲಿ ಎಸೆದು ಪ್ರತಿಭಟನೆ ಮಾಡಲಾಗುವುದು ಎಂದು ಮಾದಿಗ ದಂಡೋರ (ಎಂಆರ್ ಪಿಎಸ್) ರಾಜ್ಯ ಅಧ್ಯಕ್ಷ ಬಿ.ನರಸಪ್ಪ ದಂಡೋರ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರು ಮಾದಿಗ ಸಮಾಜದ ಒಳ ಮಿಸಲಾತಿಗೆ
ರಚಿಸಿರುವ ನ್ಯಾ..ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸಿಲ್ಲ. ಅಹಿಂದ ನಾಯಕರು ಎಂದು ಪ್ರಚಾರ ಪಡೆದು ಎಚ್ ವಿಶ್ವನಾಥ, ಪಿಜಿಆರ್ ಸಿಂಧ್ಯಾ, ಸಿ ಎಂ ಇಬ್ರಾಹಿಂ, ಮಹಾದೇವಪ್ಪ, ಶ್ರೀನಿವಾಸ ಪ್ರಸಾದ್, ಮೋಟಮ್ಮ, ಜಿ.ಪರಮೇಶ್ವರ, ಮಲ್ಲಿಕಾರ್ಜುನ
ಖರ್ಗೆ ಹಾಗೂ ಎಚ್ ಆಂಜನೇಯ ಅವರನ್ನು ಸೋಲಿಸಲು ತಂತ್ರಗಾರಿಕೆ ಮಾಡಿ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಅವರು ದೂರಿದರು.
ನ್ಯಾ.ಜೆ ಸದಾಶಿವ ಆಯೋಗ ವರದಿ ಜಾರಿಗೆ ನಡೆದ ಪಾದಯಾತ್ರೆಯ
ವೇಳೆ 8 ಜನರು ಅಪಘಾತದಲ್ಲಿ ಸಾವನ್ನಪ್ಪಿದರೂ ಸೌಜನ್ಯಕ್ಕೂ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಭೋವಿ, ಲಂಬಾಣಿ, ಕೊರವ ಹಾಗೂ ಕೊರಚ ಜನಾಂಗದವರು ವರದಿ ಜಾರಿಗೆ ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿ ಸದಾಶಿವ ಆಯೋಗ ವರದಿ ಮೂಲೆಗುಂಪು ಮಾಡಿ ಒಡೆದಾಳುವ ಹಾಗೂ ಒಪ್ಪಂದದ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನವರ ಧೋರಣೆ ಖಂಡಿಸಿ ರಾಯಚೂರಿಗೆ ಬಂದಾಗ ಅವರನ್ನು ಅಡ್ಡಗಟ್ಟಿ ಗೋಬ್ಯಾಕ್ ಘೋಷಣೆ ಕೂಗಿ ಚಪ್ಪಲಿ ಎಸೆಯುವ ಮೂಲಕ ಖಂಡಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಅಧ್ಯಕ್ಷ ದುಳ್ಳಯ್ಯ ಗುಂಜಳ್ಳಿ, ಸುರೇಶ ದುಗುನೂರು ಪತ್ರಿಕಾಗೋಷ್ಠಿಯಲ್ಲಿ ಇದ್ದರು