ಚರ್ಮ ಗಂಟು ಬಾಧೆ ಲಸಿಕೆ ೫, ಔಷಧಿಗೆ ೮ ಕೋಟಿ ರೂ. ಬಿಡುಗಡೆ

ರಾಜ್ಯದಲ್ಲಿ ಜಾನುವಾರುಗಳ ಚರ್ಮಗಂಟು ರೋಗ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಜತೆ ವೀಡಿಯೋ ಸಂವಾದ ನಡೆಸಿದರು. ಪಶುಸಂಗೋಪನಾ ಸಚಿವ ಪ್ರಭುಚೌವ್ಹಾಣ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾಪಾಹಿಂ ಸೇರಿದಂತೆ ಹಿರಿಯ ಅಧಿಕಾರಿಗಳು
ಉಪಸ್ಥಿತರಿದ್ದರು.
ಬೆಂಗಳೂರು,ಅ.೧೪- ಜಾನುವಾರುಗಳ ಚರ್ಮಗಂಟು ರೋಗ ತಡೆಯಲು ಕೂಡಲೇ ರಾಜ್ಯಾದ್ಯಂತ ಎಲ್ಲ ರಾಸುಗಳಿಗೂ ಲಸಿಕೆ ಹಾಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಜಾನುವಾರುಗಳ ಚರ್ಮಗಂಟು ರೋಗ ತಡೆ ಸಂಬಂಧ ಇಂದು ಪಶುಸಂಗೋಪನಾ ಸಚಿವ ಪ್ರಭುಚೌವ್ಹಾಣ್ ಹಾಗೂ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಮುಖ್ಯಮಂತ್ರಿಗಳು, ತಕ್ಷಣ ರಾಜ್ಯಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚನೆ ನೀಡಿದರು.ಜಾನುವಾರುಗಳ ಚರ್ಮ ಗಂಟುರೋಗ ತಡೆಯಲು ಅಗತ್ಯವಿರುವ ಲಸಿಕೆಯನ್ನು ಪಶುಸಂಗೋಪನಾ ಸಂಶೋಧನಾ ಕೇಂದ್ರದಿಂದ ಖರೀದಿಸಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ಇದಕ್ಕಾಗಿ ೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದ್ದು, ಇದರ ಜತೆಗೆ ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು ಹಾಗೂ ಇತರೆ ಔಷಧಿಗಳ ಖರೀದಿಗೆ ೮ ಕೋಟಿ ರೂ. ಸೇರಿದಂತೆ ಒಟ್ಟು ೧೩ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.
ಪಶುಸಂಗೋಪನಾ ಇಲಾಖೆ ತಕ್ಷಣವೇ ೧೫ ಲಕ್ಷ ಲಸಿಕೆಯನ್ನು ಖರೀದಿಸಿ ಎಲ್ಲ ಜಿಲ್ಲಾ ತಾಲ್ಲೂಕುಗಳಿಗೂ ಈ ಲಸಿಕೆಯನ್ನು ಕಳುಹಿಸಿ ರಾಸುಗಳಿಗೆ ಲಸಿಕೆ ಹಾಕಲು ತುರ್ತು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ ಅವರು, ಸೋಮವಾರದೊಳಗೆ ಎಲ್ಲ ಜಿಲ್ಲೆಗಳಿಗೂ ಲಸಿಕೆ ತಲುಪಿಸುವ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು.ಹಾವೇರಿ, ಗದಗ, ಬಳ್ಳಾರಿ, ವಿಜಯನಗರ, ಬೆಳಗಾವಿ ಜಿಲ್ಲೆಗಳಲ್ಲಿ ಚರ್ಮಗಂಟುರೋಗ ಅತೀ ಹೆಚ್ಚು ಕಾಣಿಸಿಕೊಂಡಿದ್ದು, ಈ ಜಿಲ್ಲೆಗಳಲ್ಲಿ ಯುದ್ಧೋಪಾದಿಯಲ್ಲಿ ಲಸಿಕೆ ಹಾಕಲು ಕ್ರಮಕೈಗೊಳ್ಳಿ. ಲಸಿಕೆ ನೀಡಲು ಸಿಬ್ಬಂದಿ ಕೊರತೆ ಇದ್ದರೆ ಪಶುಸಂಗೋಪನೆ ಡಿಪ್ಲೋಮೊ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವಂತೆಯೂ ಸೂಚಿಸಿದರು.
ನೇರ ಹಣ ವರ್ಗಾವಣೆ
ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲೀಕರುಗಳ ಖಾತೆಗೆ ಪರಿಹಾರ ಹಣವನ್ನು ನೇರ ವರ್ಗಾವಣೆ ಮಾಡುವಂತೆಯೂ ಮುಖ್ಯಮಂತ್ರಿಗಳು ಸೂಚಿಸಿದರು.ರಾಸುಗಳ ಹಾಲಿನಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ. ಈ ಕುರಿತು ಜಾಗೃತಿ ಮೂಡಿಸುವಂತೆಯೂ ಮುಖ್ಯಮಂತ್ರಿಗಳು ಸೂಚನೆ ನೀಡಿ ರೋಗ ಹರಡದಂತೆ ಮುನ್ನೆಚ್ಚೆರಿಕೆ ವಹಿಸಿ ಎಂದು ಹೇಳಿದರು.ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿಡಲು ಪ್ರತಿ ಗ್ರಾಮದಲ್ಲೂ ವ್ಯವಸ್ಥೆ ಮಾಡುವಂತೆ ಸೂಚಿಸಿದರು.