ದಾಂಪತ್ಯದಲ್ಲಿ ವಿವಾದ ಸೃಷ್ಟಿಸಿದ್ದ ನಟಿ ನುಸ್ರತ್ ಜಹಾನ್‌ಗೆ ಗಂಡು ಮಗುವಿಗೆ ಜನನ

ಕೊಲ್ಕತ್ತಾ: ದಾಂಪತ್ಯದಲ್ಲಿ ವಿವಾದ ಸೃಷ್ಟಿಸಿದ್ದ ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಗುರುವಾರ ಕೊಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾನೂನು ಪ್ರಕಾರ ವಿವಾಹ ನೋಂದಾಯಿಸಿಕೊಳ್ಳುವಂತೆ ತಾವು ಮಾಡಿದ ವಿನಂತಿಗಳನ್ನು ನುಸ್ರತ್ ಜಹಾನ್ ನಿರಾಕರಿಸಿದ್ದರು ಎಂದು ಅವರ ಪತಿ ನಿಖಿಲ್ ಜೈನ್ ಜೂನ್ ತಿಂಗಳಲ್ಲಿ ಆರೋಪಿಸಿದ್ದರು.
2020 ಆಗಸ್ಟ್‌ನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡ ಬಳಿಕ ಆಕೆಯ (ನುಸ್ರತ್) ವರ್ತನೆ ಬದಲಾಗತೊಡಗಿತ್ತು. ಬಳಿಕ ನವೆಂಬರ್‌ನಲ್ಲಿ ಮನೆ ಬಿಟ್ಟು ಹೋದಳು ಎಂದು ಜೈನ್ ತಿಳಿಸಿದ್ದಾರೆ.
2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಲ್ ಜೈನ್ ಅವರೊಂದಿಗೆ ನಡೆದಿದ್ದ ವಿವಾಹವು ಭಾರತೀಯ ಕಾನೂನುಗಳ ಪ್ರಕಾರ ಮಾನ್ಯವಾಗಿಲ್ಲ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿಕೊಂಡಿದ್ದರು.
ನುಸ್ರತ್ ಜಹಾನ್ ಅವರು ನಟ ಯಶ್ ದಾಸ್ ಗುಪ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.