ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ; ಯಡಿಯೂರಪ್ಪ

ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ; ಯಡಿಯೂರಪ್ಪ

ಹಾಸನ, ಜೂನ್ 11: ರಾಜ್ಯದಲ್ಲಿ ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಸನದಲ್ಲಿ ಹೇಳಿದ್ದಾರೆ. ಈಚೆಗೆ ಭಾರಿ ಸದ್ದು ಮಾಡಿದ್ದ ನಾಯಕತ್ವ ಬದಲಾವಣೆ ಕುರಿತ ಮಾತುಗಳಿಗೆ ಉತ್ತರ ನೀಡಿದ್ದಾರೆ.

ಹಾಸನ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ರಾಜ್ಯದ ಅಭಿವೃದ್ಧಿಗೆ ಗಮನ ಕೊಡುತ್ತೇನೆ. ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಗಮನ ಕೊಡುವೆ" ಎಂದು ಹೇಳಿದ್ದಾರೆ.

"ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬೆಂಬಲ ನನಗೆ ಇನ್ನಷ್ಟು ಬಲ ತಂದಿದೆ. ಎರಡು ವರ್ಷ ಯಾವುದೇ ಬದಲಾವಣೆ ಇಲ್ಲ, ಬಿಎಸ್ ವೈ ನೇತೃತ್ವದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ ಎಂದಿದ್ದಾರೆ. ನಾಯಕರ ಇಂಥ ಮಾತುಗಳಿಂದ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡುವೆ" ಎಂದಿದ್ದಾರೆ.