ಕನ್ನಡ ಧ್ವಜಕ್ಕೆ ಬೆಂಕಿ: ಕ್ರಮಕ್ಕೆ ಆಗ್ರಹ

ದಾವಣಗೆರೆ: ಬೆಳಗಾವಿಯಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ತಂದಿರುವ ಎಂಇಎಸ್ ಅನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇಂಥ ಹೇಯ ಕೆಲಸಗಳು ವಿವಿಧ ಭಾಷಿಕರ ನಡುವೆ ವೈಷಮ್ಯವನ್ನು ಹುಟ್ಟು ಹಾಕುತ್ತವೆ. ಸಾಮರಸ್ಯದ ಸಹಬಾಳ್ವೆಗೆ ಕೊಡಲಿಯೇಟು ನೀಡುತ್ತವೆ. ಕನ್ನಡಿಗರು ಅಸಂಖ್ಯಾತ ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ವಿವಿಧ ಭಾಷಿಕರು ಅಸಂಖ್ಯಾತ ಸಂಖ್ಯೆಯಲ್ಲಿ ಕನ್ನಡ ನಾಡಿನಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾರೇ ಆಗಲಿ ತಮಗೆ ಬದುಕನ್ನು ಕಟ್ಟಿಕೊಳ್ಳಲು ಆಶ್ರಯ ನೀಡಿದ ನಾಡಿನ ಜನ, ನೆಲ, ಜಲ, ಗಡಿ, ಭಾಷೆ, ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅತ್ಯಂತ ಗೌರವವನ್ನು ಹೊಂದಿರಬೇಕು ಎಂದು ತಿಳಿಸಿದರು.
ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಘಟನೆಯ ಮುಂದುವರಿದ ಭಾಗವಾಗಿ ನಾಡಿನ ವಿವಿಧ ಭಾಗಗಳಲ್ಲಿ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ 12ನೇ ಶತಮಾನದ ಕ್ರಾಂತಿ ಪುರುಷ ಬಸವೇಶ್ವರರ ಗೌರವಾರ್ಥ ಪ್ರತಿಷ್ಠಾಪಿಸಿರುವ ಅವರ ಪುತ್ಥಳಿಗಳಿಗೆ ನಾಡಿನ ವಿವಿಧ ಕಡೆ ಅವಮಾನ ಮಾಡುವ ಕೆಲಸಗಳೂ ನಡೆಯುತ್ತಿದೆ. ಇದು ಕೂಡ ಅಕ್ಷಮ್ಯ ಅಪರಾಧ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಆರ್.ಉಜ್ಜಿನಪ್ಪ, ಕನ್ನಡ ಜಾಗೃತಿ ಸಮಿತಿಯ ಬಾ.ಮ. ಬಸವರಾಜಯ್ಯ, ಕಲಾವಿದ ಎ. ಮಹಾಲಿಂಗಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಕಸಾಪ ನಿಯೋಜಿತ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಕಸಾಪ ನಿಯೋಜಿತ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಶರಣ ಸಾಹಿತ್ಯ ಪರಿಷತ್ತಿನ ಕೆ.ಬಿ. ಪರಮೇಶ್ವರಪ್ಪ, ಸಿರಿಗೆರೆ ಪರಮೇಶ್ವರಪ್ಪ, ಬೇತೂರು ಷಡಾಕ್ಷರಪ್ಪ, ಆನೆಕೊಂಡ ಲಿಂಗರಾಜ್, ಕಮ್ಮತ್ತನಹಳ್ಳಿ ಲಿಂಗರಾಜ್, ಸಿದ್ದೇಶಪ್ಪ, ಶೈಲಾ ಅವರೂ ಇದ್ದರು.