ಪ್ರೀತಿಸಿ ಮದ್ವೆಯಾದ ಜೋಡಿಗೆ ಜೀವ ಭಯ: ಊರು ಬಿಟ್ಟು ಅಲೆದಾಡುತ್ತಿರುವ ಪ್ರೇಮಿಗಳಿಗೆ ಬೇಕಿದೆ ಪೊಲೀಸರ ಅಭಯ

ಕೊಪ್ಪಳ: ಅವರಿಬ್ಬರು ಕಾಲೇಜು ದಿನಗಳಿಂದ ಪರಸ್ಪರ ಇಷ್ಟಪಟ್ಟವರು. ಅಲ್ಲದೆ, ನಾಲ್ಕೈದು ವರ್ಷಗಳ ಕಾಲ ಪ್ರೀತಿಸಿದ ಬಳಿಕ ತಮ್ಮ ಸಂಬಂಧಕ್ಕೆ ಮದುವೆ ಅಧಿಕೃತ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ, ಹುಡುಗಿಯ ಕುಟುಂಬ ಮಾತ್ರ ಮದುವೆಗೆ ಒಪ್ಪಿರಲಿಲ್ಲ.
ಅಂದಹಾಗೆ ಈ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆಯಲ್ಲಿ. ಪ್ರೇಮಿಗಳಿಬ್ಬರ ಹೆಸರು ಸಂದೀಪ್ ಹಾಗೂ ಲಕ್ಷ್ಮೀಪ್ರಿಯ. ಪ್ರಸ್ತುತ ಇಬ್ಬರು ಜೀವ ಭಯದಲ್ಲೇ ಜೀವನ ಕಳೆಯುವಂತಾಗಿದೆ. ಏಕೆಂದರೆ, ಹೆತ್ತವರ ವಿರೋಧದ ನಡುವೆಯು ರಿಜಿಸ್ಟ್ರಾರ್ ಮ್ಯಾರೆಜ್ ಆಗಿರೋ ಈ ಜೋಡಿ, ಇದೀಗ ಹುಟ್ಟಿದ ಊರು ತೊರೆದು ಅಲೆದಾಡವಂತಾಗಿದೆ.
ಲಕ್ಷ್ಮೀಪ್ರಿಯ ಹಾಗೂ ಸಂದೀಪ್ ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರು ಮನೆಯವರಿಗೆ ಒಪ್ಪಿಸಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದಕ್ಕೆ ಬಯಸಿದ್ದರು. ಆದರೆ, ಲಕ್ಷ್ಮೀ ತಂದೆ ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಏಕೆಂದರೆ, ಶ್ರೀನಿವಾಸ್ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅದರಲ್ಲಿ ಲಕ್ಷ್ಮೀಯೇ ಹಿರಿಯ ಪುತ್ರಿ. ಅಲ್ಲದೇ ಕೊಟ್ಯಾಂತರ ರೂಪಾಯಿ ಆಸ್ತಿ ಇರೋ ಹಿನ್ನಲೆಯಲ್ಲಿ ಆಸ್ತಿ ಹೊಡೆಯಲು ಸಂದೀಪ್ ಈ ರೀತಿ ಸ್ಕೆಚ್ ಹಾಕಿದ್ದಾನೆಂದು ಪುತ್ರಿಯ ಬಳಿಯ ತಂದೆ ಹೇಳಿದ್ದರಂತೆ. ಇದಕ್ಕೆ ಲಕ್ಷ್ಮೀ ಮಾತ್ರ ಸುತಾರಂ ಒಪ್ಪಿರಲ್ಲಿಲ್ಲ. ಮದುವೆ ಅಂತಾ ಆದ್ರೆ ಸಂದೀಪ್ನನ್ನೇ ಮದುವೆಯಾಗೋದು ಎಂದು ಪಟ್ಟು ಹಿಡಿದಿದ್ದಳು.
ಕೊನೆಗೂ ತನ್ನಿಷ್ಟದಂತೆ ಲಕ್ಷ್ಮೀ, ಸಂದೀಪ್ನನ್ನೇ ಮದುವೆ ಆಗಿದ್ದಾರೆ. ತನ್ನ ಮಾತು ಮೀರಿ ಸಂದೀಪ್ ಜೊತೆ ಹೋಗಿ ಮದುವೆಯಾಗಿದ್ದಕ್ಕೆ ಹೆತ್ತ ಮಗಳು ಹಾಗೂ ಅಳಿಯನನ್ನೇ ಕೊಲೆ ಮಾಡಿಸಲು ಶ್ರೀನಿವಾಸ್ ಲಕ್ಷ ಲಕ್ಷ ರೂ. ಸುಫಾರಿ ನೀಡಿದ್ದಾರೆಂದು ಅವಳ ಮಗಳೇ ಆರೋಪ ಮಾಡುತ್ತಿದ್ದಾಳೆ.
ಇನ್ನು ಸಂದೀಪ್ ಮತ್ತು ಲಕ್ಷ್ಮೀ ಇಬ್ಬರದು ಅಕ್ಕಪಕ್ಕದ ಊರು. ಕಾಲೇಜು ದಿನದಿಂದಲೇ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಹೈದರಾಬಾದ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂದೀಪ್ ಹೊಸ ಜೀವನ ಶುರು ಮಾಡುವುದಕ್ಕೆ ನಿರ್ಧರಿಸಿದ್ದ. ಅತ್ತ ಲಕ್ಷ್ಮೀ ಕೂಡ ಡಬಲ್ ಗ್ರ್ಯಾಚುವೆಟ್ ಮುಗಿಸಿರುವುದರಿಂದ, ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಆದರೆ ಲಕ್ಷ್ಮೀ ಮನೆಯವರು ಮಾತ್ರ ಇದಕ್ಕೆ ಮೊದಲಿನಿಂದಲೂ ವಿರೋಧಿಸಿದ್ದರಂತೆ. ಅಲ್ಲದೇ ಮನೆಯಲ್ಲೆ ಹಾಲಿನಲ್ಲಿ ವಿಷ ಹಾಕಿಸಿ ಕೊಲ್ಲುವುದಕ್ಕೆ ನಿರ್ಧರಿಸಿದ್ದರಂತೆ. ಆದರೆ ಈ ವಿಷಯ ಲಕ್ಷ್ಮೀಗೆ ಗೊತ್ತಾಗಿ, ಸಂದೀಪ್ಗೆ ತಿಳಿಸಿದ್ದಳಂತೆ ಕೂಡಲೇ ಸಂದೀಪ್ ಆಕೆಯನ್ನು ಮನೆಯಿಂದ ಕರೆದುಕೊಂಡು ಬಂದು ಮದುವೆಯಾಗಿದ್ದಾನೆ. ಆದ್ರೂ ನೆಮ್ಮದಿಯಿಂದ ನಮ್ಮನ್ನು ಬದುಕಲು ಬಿಡ್ತಿಲ್ಲ ಅಂತ ಈ ನವ ಜೋಡಿ ಜೀವ ರಕ್ಷಣೆ ನೀಡುವಂತೆ ಎಸ್ಪಿ ಮೊರೆ ಹೋಗಿದ್ದಾರೆ.
ಸದ್ಯ ಕೊಪ್ಪಳ ಎಸ್ಪಿ ಅರುಣಾಂಗ್ಶು ಗಿರಿ ಅವರಿಗೆ ನವಜೋಡಿ ದೂರು ನೀಡಿದೆ. ನಮ್ಮನ್ನು ಹೇಗಾದ್ರು ಮಾಡಿ ಕಾಪಾಡಿ ಎಂದು ಮನವಿ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ಊರು ಬಿಟ್ಟು ಅಲೆಮಾರಿಯಾಗಿರುವ ಈ ಜೋಡಿ ಪೊಲೀಸರಿಂದ ರಕ್ಷಣೆ ಬೇಡುತ್ತಿದೆ. ಅದೇನೆ ಇರಲಿ ಪ್ರೀತಿಸಿದ ತಪ್ಪಿಗೆ ಹೆತ್ತವರು ನವಜೋಡಿಯನ್ನೇ ಕೊಲ್ಲುವುದಕ್ಕೆ ಮುಂದಾಗಿರುವುದು ನಿಜಕ್ಕೂ ದುರಂತವೇ ಸರಿ. (ದಿಗ್ವಿಜಯ ನ್ಯೂಸ್)