ಕಲಬುರಗಿ ಮಹಾನಗರ ಪಾಲಿಕೆ ಬೆಂಬಲ ಅಂತಿಮವಾಗಿಲ್ಲ: ಎಚ್‌ಡಿಕೆ

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಸದಸ್ಯರು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರದಲ್ಲಿ ಹಲವು ಬಡಾವಣೆಗಳಲ್ಲಿ ಇಂದಿಗೂ ಜನರು ಅತ್ಯಂತ ಕಡೆಯದಾದ ಜೀವನ ನಡೆಸುತ್ತಿದ್ದಾರೆ. ಅವರ ಜೀವನಮಟ್ಟ ಸುಧಾರಿಸಲು ಯಾವ ಪಕ್ಷ ಪ್ರಯತ್ನಿಸುತ್ತದೋ ಅಂತಹವರಿಗೆ ಬೆಂಬಲ ಕೊಡುವ ಚಿಂತನೆ ಇದೆ. ಈ ಸಂದರ್ಭದಲ್ಲಿ ಜಾತ್ಯತೀತತೆ, ಕೋಮುವಾದ ವಿಚಾರಗಳು ಪರಿಗಣನೆಗೆ ಬರುವುದಿಲ್ಲ ಎಂದು ಹೇಳಿದರು. ಶಾಸಕ ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಮುಖಂಡರಾದ ಕೃಷ್ಣರೆಡ್ಡಿ, ಸಂಜೀವ ಯಾಕಾಪುರೆ, ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ ಇದ್ದರು.