'ಕ್ರಾಂತಿ' ಬೈಕ್ ಪ್ರಚಾರ ಮಾಡಿ ಇದ್ದ ಕೆಲಸ ಹೋಯ್ತು ಎಂದ ಅಭಿಮಾನಿ: ವಿಡಿಯೋ ವೈರಲ್

'ಕ್ರಾಂತಿ' ಬೈಕ್ ಪ್ರಚಾರ ಮಾಡಿ ಇದ್ದ ಕೆಲಸ ಹೋಯ್ತು ಎಂದ ಅಭಿಮಾನಿ: ವಿಡಿಯೋ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಕಳೆದ ವಾರ ತೆರೆಗಪ್ಪಳಿಸಿದೆ. ಅಭಿಮಾನಿಗಳ ಮನಗೆದ್ದು ಮುನ್ನುಗ್ಗುತ್ತಿದೆ. ಸಿನಿಮಾ ಈಗಾಗಲೇ ಕೋಟಿ ಕೋಟಿ ಕೊಳ್ಳೆ ಹೊಡೆದಿದೆ. ದರ್ಶನ್ ಕೂಡ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಇನ್ನು 'ಕ್ರಾಂತಿ' ಚಿತ್ರಕ್ಕಾಗಿ ಪ್ರಚಾರ ಮಾಡಿದ್ದ ಅಭಿಮಾನಿಯೊಬ್ಬ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾನೆ.

ನಟ ದರ್ಶನ್ ಅವರ ಅಪ್ಪಟ ಅಭಿಮಾನಿ ಅವಿನಾಶ್ ಎಂಬಾತ 'ಕ್ರಾಂತಿ' ಚಿತ್ರಕ್ಕಾಗಿ ವಿಶೇಷವಾಗಿ ಪ್ರಚಾರ ಮಾಡಿದ್ದರು. ತಮ್ಮ ಬೈಕ್‌ನ 'ಕ್ರಾಂತಿ' ಸಿನಿಮಾ ಪೋಸ್ಟರ್‌ಗಳಿಂದ ರಾರಾಜಿಸುವಂತೆ ಮಾಡಿದ್ದರು. ಆ ಬೈಕ್ ಏರಿ ರಾಜ್ಯದ ಮೂಲೆ ಮೂಲೆ ಸುತ್ತಾಡಿ ಸಿನಿಮಾ ಪ್ರಚಾರ ಮಾಡಿದ್ದರು. ಉಪೇಂದ್ರ, ಶರಣ್, ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳ ಮನೆ ಬಳಿ ಹೋಗಿ ಅವರಿಂದ ಬೈಕ್ ಚಲಾಯಿಸಿ ಸಿನಿಮಾ ಪ್ರಮೋಷನ್ ಮಾಡಿದ್ದರು. ನಟ ದರ್ಶನ್ ಬೇಡ ಎಂದು ಹೇಳಿದರೂ ಕೇಳದ 2 ತಿಂಗಳ ಕಾಲ ಕೆಲಸ ಬಿಟ್ಟು ಬೈಕ್ ಏರಿ 'ಕ್ರಾಂತಿ' ಪ್ರಚಾರ ಮಾಡಿದ್ದರು.

ಇದೀಗ ದಿಢೀರನೇ ವಿಡಿಯೋವೊಂದನ್ನು ಶೇರ್ ಮಾಡಿರುವ ಅವಿನಾಶ್, ತಾವು ಕೆಲಸ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದ್ದು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.


ನನ್ನ ಪರ್ಸನಲ್ ಲೈಫ್‌ಗೆ ಪೆಟ್ಟು ಬಿತ್ತು

ಅಷ್ಟಕ್ಕೂ ವಿಡಿಯೋದಲ್ಲಿ ದರ್ಶನ್ ಅಭಿಮಾನಿ ಏನು ಹೇಳಿದ್ದಾರೆ, ಅಂದ್ರೆ "ಡಿಸೆಂಬರ್ 9ಕ್ಕೆ ನಾನು, ಬಾಸ್ ಆಶೀರ್ವಾದದಿಂದ 'ಕ್ರಾಂತಿ' ಸಿನಿಮಾ ಪ್ರಮೋಷನ್ ಸ್ಟಾರ್ಟ್ ಮಾಡಿದ್ದು ಗೊತ್ತೇಯಿದೆ. ಈಗ ಫೆಬ್ರವರಿ 1 ಬಂದಿದೆ. 'ಕ್ರಾಂತಿ' ಪ್ರಮೋಷನ್‌ ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಸಿನಿಮಾ ಕೂಡ ಹಿಟ್ ಆಗಿದೆ. 100 ಕೋಟಿ ದಾಟಿದೆ ಮೂವಿ ನಿಮಗೆಲ್ಲಾ ಗೊತ್ತಿದೆ. ಬಟ್ ನನ್ನ ಪರ್ಸನಲ್ ಲೈಫ್‌ ಅಲ್ಲಿ ದೊಡ್ಡ ಹೊಡೆದ ಬಿದ್ದಿದೆ"

ಕಂಪೆನಿಯಿಂದ ಟರ್ಮಿನೇಟ್ ಮಾಡಿದ್ದಾರೆ

"ಇದು ನನ್ನ ತಪ್ಪು ಎಂದೇ ಹೇಳಬಹುದು. ದರ್ಶನ್ ಸರ್ ಬೇಡ ಎಂದು ಹೇಳಿದ್ದರು. ಆದರೂ ಆವರ ಮಾತು ಕೇಳದೇ ಮಾಡ್ದೆ. ನಮ್ಮ ಕಂಪನಿಯವರು ನನಗೆ ಹೇಳದೇ ನನ್ನನ್ನು ಟರ್ಮಿನೇಟ್ ಮಾಡಿದ್ದಾರೆ. ಅಂದ್ರೆ ನನ್ನನ್ನು ಕೆಲಸದಿಂದ ತೆಗೆದುಬಿಟ್ಟಿದ್ದಾರೆ. ಇನ್‌ಫಾರ್ಮ್‌ ಮಾಡದೇ ಟರ್ಮಿನೇಟ್ ಮಾಡಿದ್ದಾರೆ. 2 ತಿಂಗಳು ಆಯಿತು ಅಲ್ವಾ? ಅದಕ್ಕೆ ಹೀಗೆ ಟರ್ಮಿನೇಟ್ ಮಾಡಿದ್ದಾರೆ. ಟರ್ಮಿನೇಟ್ ಮಾಡಿದರೆ ಬೇರೆ ಕಂಪೆನಿಯಲ್ಲಿ ಕೆಲಸ ಸಿಗುವುದು ಕೂಡ ಕಷ್ಟವಾಗುತ್ತೆ"

ಇಲ್ಲಿಗೆ 'ಕ್ರಾಂತಿ' ಪ್ರಮೋಷನ್ ಮುಗೀತು

"2 ದಿನ ಆಯಿತು ಟರ್ಮಿನೇಟ್ ಮಾಡಿ. ನೋಡೋಣ. ಏನು ಮಾಡುವುದು ಗೊತ್ತಾಗ್ಲಿಲ್ಲ. ಮುಂದೆ ಏನು ಮಾಡ್ತೀನಿ ಅಂತನೂ ಗೊತ್ತಿಲ್ಲ. ಕ್ರಾಂತಿ ಸಿನಿಮಾ ಪ್ರಮೋಷನ್ ಎಷ್ಟು ಆಗುತ್ತೋ ಅಷ್ಟು ಮಾಡಿ ಮುಕ್ತಾಯ ಮಾಡಿದ್ದೀನಿ. ಇಲ್ಲಿಗೆ ಕ್ರಾಂತಿ ಪ್ರಮೋಷನ್ ಮುಕ್ತಾಯ ಆಗ್ತಿದೆ" ಎಂದು ಅವಿನಾಶ್ ವಿಡಿಯೋದಲ್ಲಿ ಹೇಳಿದ್ದಾರೆ. ಅವಿನಾಶ್ ತಮ್ಮ ಬುಲೆಟ್ ಬೈಕ್‌ಗೆ 'ಕ್ರಾಂತಿ' ಪೋಸ್ಟರ್‌ಗಳನ್ನು ಅಂಟಿಸಿಕೊಂಡು ವಿಭಿನ್ನವಾಗಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು.

ಅಭಿಮಾನಿಗಳಿಂದಲೇ ಭರ್ಜರಿ 'ಕ್ರಾಂತಿ'

ಹಲವು ತಿಂಗಳುಗಳಿಂದ ಅಭಿಮಾನಿಗಳು 'ಕ್ರಾಂತಿ' ಸಿನಿಮಾ ಪ್ರಚಾರ ಮಾಡುತ್ತಾ ಬಂದಿದ್ದರು. ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡುವುದಕ್ಕಿಂತ ತಿಂಗಳುಗಳ ಮೊದಲೇ ಅಭಿಮಾನಿಗಳ ಪ್ರಚಾರ ಶುರುವಾಗಿತ್ತು. ಹೋದಲ್ಲಿ ಬಂದಲ್ಲಿ 'ಕ್ರಾಂತಿ' ಪೋಸ್ಟರ್‌ಗಳು ರಾರಾಜಿಸುತ್ತಿತ್ತು. ಬೈಕ್ ರ್ಯಾಲಿ ಸೇರಿದಂತೆ ನಾನಾ ವಿಧದಲ್ಲಿ ಅಭಿಮಾನಿಗಳು ಚಿತ್ರವನ್ನು ಬೆಂಬಲಿಸಿದ್ದರು. ಅಭಿಮಾನಿಗಳ ಈ ಪ್ರೀತಿ ಕಂಡು ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಲೆ ಬಾಗಿದ್ದರು. ಅಭಿಮಾನಿಗಳ ಋಣ ತೀರಿಸೋಕೆ ಸಾಧ್ಯವಿಲ್ಲ ಎಂದಿದ್ದರು. ಚಿತ್ರತಂಡ ಕೂಡ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ತಿಳಿಸಿತ್ತು.