ಬಲವಂತದ ಮತಾಂತರ ತಡೆ ಮಸೂದೆ ಸ್ವಾಗತಾರ್ಹ- ಅಶ್ವತ್ಥನಾರಾಯಣ

ಬಲವಂತದ ಮತಾಂತರ ತಡೆ ಮಸೂದೆ ಸ್ವಾಗತಾರ್ಹ- ಅಶ್ವತ್ಥನಾರಾಯಣ

ಬೆಂಗಳೂರು: ಬೆಳೆಹಾನಿ ಪರಿಹಾರ ಮೊತ್ತವನ್ನು ಹೆಚ್ಚಿಸಿರುವುದು ಮತ್ತು ಬಲವಂತದ ಮತಾಂತರ ತಡೆಯಲು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯದ ಬಿಜೆಪಿ ಸರಕಾರ ಮುಂದಾಗಿರುವುದು ಅತ್ಯಂತ ಪ್ರಮುಖ ನಿರ್ಧಾರಗಳು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ, 7,600 ಮನೆಗಳ ಕುಸಿತದ ಕುರಿತು ವರದಿ ತರಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯದ ಬಿಜೆಪಿ ಸರಕಾರ ಮುಂದಾಗಿದೆ. ಈ ಹಿಂದೆ ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಟ್ಟು ರೈತಪರ ಎಂದು ಜನಮೆಚ್ಚುಗೆ ಗಳಿಸಿದ್ದ ನಮ್ಮ ಸರಕಾರ ಈಗ ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾದ 10 ಲಕ್ಷ ರೈತರ ಕುಟುಂಬಗಳಿಗೆ ಅತಿ ಹೆಚ್ಚು ಹಣ ಬಿಡುಗಡೆಗೆ ಮುಂದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ತಿಳಿಸಿದರು.

ಕೇವಲ 48 ಗಂಟೆಗಳಲ್ಲಿ ಇದನ್ನು ಅನುಷ್ಠಾನ ಮಾಡುವುದಾಗಿಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಣವನ್ನೂ ಬಿಡುಗಡೆ ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷವು ಅಭಿನಂದಿಸುವುದಾಗಿ ತಿಳಿಸಿದರು. ಒಣಬೇಸಾಯ- ದ್ವಿಗುಣ ಮೊತ್ತವಾಗಿ 13,600 ರೂಪಾಯಿ, ನೀರಾವರಿ ಪ್ರದೇಶದ ಒಂದು ಹೆಕ್ಟೇರ್ ಬೆಳೆ ಹಾನಿಗೆ ಒಟ್ಟು 25,000 ರೂಪಾಯಿ ಬೆಳೆ ಪರಿಹಾರ, ತೋಟಗಾರಿಕೆ ಬೆಳೆಗೆ 28 ಸಾವಿರ ರೂಪಾಯಿ ನೀಡುತ್ತಿರುವುದು ಸ್ವಾಗತಾರ್ಹ ನಿರ್ಧಾರ ಎಂದು ತಿಳಿಸಿದರು.

ಮತಾಂತರದ ಪಿಡುಗನ್ನು ನಿಯಂತ್ರಿಸಲು ಸರಕಾರ ಮುಂದಾಗಿರುವುದು ಅತ್ಯಂತ ಮಹತ್ವದ ಕ್ರಮವಾಗಿದೆ. ಕೆಲವು ಧರ್ಮಾಂಧರು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ರಾಷ್ಟ್ರಘಾತುಕ ಕೆಲಸ ಮಾಡುವ ದೃಷ್ಟಿಯಿಂದ ಮತಾಂತರ ಮಾಡುತ್ತಿದ್ದಾರೆ. ಇದನ್ನು ತಡೆಯಲು ಮಸೂದೆ ತಂದಿರುವುದು ಉತ್ತಮ ಕಾರ್ಯ. ಲವ್ ಜಿಹಾದ್, ಮದುವೆಯಾದ ಬಳಿಕ ಐಸಿಸ್ ಚಟುವಟಿಕೆಯಂಥ ಕಾರ್ಯಕ್ಕೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ಆಮಿಷದಿಂದ ಮತಾಂತರ ತಡೆಯಲು ಸರಕಾರ ಮುಂದಾಗಿದೆ. ಕಾಂಗ್ರೆಸ್‍ನವರು ಇಂಥ ಮಸೂದೆಯನ್ನು ಅಧ್ಯಯನ ಮಾಡಿ ಪ್ರತಿಕ್ರಿಯೆ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‍ನವರು ಹೋಂವರ್ಕ್ ಮಾಡುವುದಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರ ಓಲೈಕೆಗಾಗಿ ಇಂಥ ಟೀಕೆ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ವಿವರಿಸಿದರು. ಇದು ಕ್ರಿಶ್ಚಿಯನ್ ಧರ್ಮ ಅಥವಾ ಒಂದು ಧರ್ಮವನ್ನು ಗುರಿಯಾಗಿ ಇಟ್ಟುಕೊಂಡ ಮಸೂದೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರಕಾರಗಳು ಇಂಥ ಮಸೂದೆಯನ್ನು ಈ ಹಿಂದೆ ಜಾರಿಗೊಳಿಸಿದ್ದವು. ಆಸೆ, ಆಮಿಷದಿಂದ ಮತ್ತು ಸೇವೆಯ ನೆಪದಲ್ಲಿ ಮತಾಂತರ ಮಾಡುವುದನ್ನು ತಡೆಯಲು ಈ ಮಸೂದೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕೊಡಗಿನ ವಿರಾಜಪೇಟೆಯ ಇಂದಿರಾರನ್ನು ರಿಯಾಜ್ ಮದುವೆಯಾಗಿ ಆಯಿಷಾ ಎಂದು ಹೆಸರು ಬದಲಿಸಿ ಉಗ್ರವಾದಿ ಸಂಘಟನೆ ಇಂಡಿಯನ್ ಮುಜಾಹಿದೀನ್ ಕಾರ್ಯಕ್ಕೆ ಬಳಸಿದ್ದು ನಮ್ಮ ಕಣ್ಣಮುಂದಿದೆ. ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬರ ಮೊಮ್ಮಗನದೂ ಇದೇ ಮಾದರಿಯ ಪ್ರಕರಣ ವರದಿಯಾಗಿದೆ. ಎನ್‍ಐಎ ಬಂಧಿಸಿದಾಗ ಇದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಮತಾಂತರಕ್ಕೆ ಹಲವು ಸಂಘಟನೆಗಳ ಮೂಲಕ ಹಣ ಹರಿದುಬರುತ್ತಿದೆ. ಮುರುಘಾ ಮಠದ ಸ್ವಾಮೀಜಿ ಮತಾಂತರದ ವಿರುದ್ಧ ಆತಂಕ ಸೂಚಿಸಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕರು ಮತ್ತು ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು ಇದೇವಿಚಾರವಾಗಿ ಸರಕಾರಕ್ಕೇ ಪತ್ರ ಬರೆದಿದ್ದಾರೆ. ಕ್ರಿಶ್ಚಿಯನ್ ಸಮುದಾಯದವರು ಬಡವರು, ದಲಿತರು, ಲಂಬಾಣಿ ಜನರನ್ನು, ಕುರುಬ ಸಮುದಾಯದವರು, ಒಕ್ಕಲಿಗರು, ವೀರಶೈವರು ಮತ್ತು ಲಿಂಗಾಯತರನ್ನು ಮತಾಂತರ ಮಾಡುತ್ತಿರುವ ಕುರಿತು ಮತ್ತು ಸಾಮಾಜಿಕ ಅಶಾಂತಿಗೆ ಕಾರಣ ಆಗುತ್ತಿರುವ ಕುರಿತು ಕಳವಳ ಸೂಚಿಸಿದ್ದಾರೆ. ಈ ಆಘಾತಕಾರಿ ವಿಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ವಿವರಿಸಿದರು. ಇದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿಗರು ಈ ಮಸೂದೆ ಕ್ರಿಶ್ಚಿಯನ್ನರ ವಿರುದ್ಧ ಎಂದು ತಿಳಿಸಿ ಜನರನ್ನು ತಪ್ಪು ದಾರಿಗೆ ಎಳೆಯಬಾರದು. ಕ್ರಿಶ್ಚಿಯನ್ನರೂ ಈ ಮಸೂದೆಯ ಒಳಿತು ಕೆಡುಕುಗಳ ಕುರಿತು ಅಭ್ಯಸಿಸಬೇಕು. ತಪ್ಪು ಅರ್ಥ ಮಾಡುವುದು ಮತ್ತು ಮಸೂದೆ ಜಾರಿಗೊಳಿಸಲು ವಿರೋಧ ಸೂಚಿಸುವುದು ಒಳಿತಲ್ಲ ಎಂದು ನುಡಿದರು.

ಕಾಂಗ್ರೆಸ್ ಮುಖಂಡರು ದೆಹಲಿಯ ಸಂಸತ್ ಮತ್ತು ಇಲ್ಲಿನ ವಿಧಾನಸಭೆ, ಪರಿಷತ್ ಅಧಿವೇಶನದಲ್ಲಿ ಕೇವಲ ಗದ್ದಲ ಎಬ್ಬಿಸುವುದರಲ್ಲಿ ನಿರತರಾಗಿದ್ದಾರೆ. ಸದನ ನಡೆಯದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಚಾಳಿಯಾಗಿದೆ ಎಂದು ಟೀಕಿಸಿದರು. ಈ ಚಾಳಿಗೆ ಮುಂದಿನ ದಿನಗಳಲ್ಲಿ ಜನರು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.

ಬಿಜೆಪಿ ರಾಜ್ಯ ವಕ್ತಾರರಾದ ಗಿರಿಧರ್ ಉಪಾಧ್ಯಾಯ ಅವರು ಮಾತನಾಡಿ, ಪ್ರಾರ್ಥನೆ ಮತ್ತು ಸೇವೆಯ ನೆಪದಲ್ಲಿ ಮತಾಂತರಗಳು ನಡೆಯುತ್ತಿವೆ. ಕ್ರಿಶ್ಚಿಯನ್ನರು ಜನರಲ್ಲಿ ಮೂಢನಂಬಿಕೆಯನ್ನು ಬಿತ್ತಿ ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕುಂಬಳಕಾಯಿ ಕಳ್ಳ ಎಂದೊಡನೆ ಕ್ರಿಶ್ಚಿಯನ್ನರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ ಎಂದು ಪ್ರಶ್ನಿಸಿದರು. ಬಲವಂತದ ಮತ್ತು ಆಮಿಷವೊಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದನ್ನೀಗ ಅನುಷ್ಠಾನಕ್ಕೆ ತರುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಅಧ್ಯಕ್ಷರಾದ ಮುಜ್ಹಾಮಿಲ್ ಅಹ್ಮದ್ ಬಾಬು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ ಅವರು ಭಾಗವಹಿಸಿದ್ದರು.