ಬಿಜೆಪಿ ಕೋರ್ ಕಮಿಟಿ ಸಭೆ ದಿಡೀರ್ ರದ್ದು

ಬೆಂಗಳೂರು - ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ಪಕ್ಷದ ಸಂಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ನಡೆಸಲು ಉದ್ದೇಶಿಸಲಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಕೊನೆ ಕ್ಷಣದಲ್ಲಿ ದಿಢೀರನೆ ರದ್ದಾಗಿದೆ.
ಬೆಳಗ್ಗೆ 8.30ಕ್ಕೆ ಖಾಸಗಿ ಹೋಟೆಲ್‍ನಲ್ಲಿ ಅಮಿತ್ ಷಾ ಜೊತೆ ಬಿಜೆಪಿ ಹಿರಿಯ ಸದಸ್ಯರನ್ನೊಳಗೊಂಡ ಕೋರ್ ಕಮಿಟಿ ಸಭೆಯನ್ನು ನಿಗದಪಡಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಆರ್.ಅಶೋಕ್ ಸೇರಿದಂತೆ ಮತ್ತಿತರರ ಜೊತೆ ಸಭೆಯನ್ನು ನಿಗದಿಪಡಿಸಲಾಗಿತ್ತು. 2023ರ ವಿಧಾನಸಭೆ ಚುನಾವಣೆ ರಾಜ್ಯಾದ್ಯಂತ ಪಕ್ಷ ಸಂಘಟನೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಮನೆಗೆ ತಲುಪಿಸುವುದು, ಮೀಸಲಾತಿ ವಿವಾದ, ಸಂಪುಟ ವಿಸ್ತರಣೆ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಚರ್ಚಿಸಲು ಸಭೆ ನಿಗದಿಯಾಗಿತ್ತು. ಆದರೆ ಏಕಾಏಕಿ ಸಭೆಯನ್ನು ರದ್ದುಪಡಿಸಲಾಯಿತು. ಆದರೆ ಕೋರ್‍ಕಮಿಟಿ ರದ್ದಾಗಲು ಕಾರಣ ಏನೆಂಬುದನ್ನು ಬಹಿರಂಗಪಡಿಸಿಲ್ಲ.