ಜಲಜೀವನ್‌ ಮಿಷನ್‌ನಡಿ ರಾಜ್ಯದ 9 ಜಿಲ್ಲೆಗಳ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು: ಮಾಧುಸ್ವಾಮಿ

ಜಲಜೀವನ್‌ ಮಿಷನ್‌ನಡಿ ರಾಜ್ಯದ 9 ಜಿಲ್ಲೆಗಳ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು: ಮಾಧುಸ್ವಾಮಿ

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್‌ ಮಿಷನ್‌ನಡಿ ರಾಜ್ಯದ ಒಂಭತ್ತು ಜಿಲ್ಲೆಗಳ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ 4046 ಕೋಟಿ ರೂ. ಮೊತ್ತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ಮೈಸೂರು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ “ಮನೆ ಮನೆಗೆ ಗಂಗೆ’ ಘೋಷಣೆಯಡಿ ನೀರು ಪೂರೈಕೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕೇಂದ್ರ ಸರ್ಕಾರದ ಈ ಯೋಜನೆಯಡಿ ರಾಜ್ಯ ಸರ್ಕಾರವೂ ಅನುದಾನ ಒದಗಿಸಲಿದೆ. ಇದೊಂದು ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು.

ಸಂಚಾರಿ ಚಿಕಿತ್ಸಾ ವಾಹನ: ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ 290 ಸಂಚಾರಿ ಚಿಕಿತ್ಸಾಲಯ ಒದಗಿಸುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಈ ವಾಹನಗಳಲ್ಲಿ ಪಶು ವೈದ್ಯರು, ಇಬ್ಬರು ಸಿಬ್ಬಂದಿ, ಚಿಕಿತ್ಸಾ ಸಲಕರಣೆ, ಔಷಧ ಎಲ್ಲವೂ ಇರಲಿದೆ ಎಂದು ಹೇಳಿದರು.

ಬಾಬು ಜಗಜೀವನ್‌ರಾಂ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಚರ್ಮ ಕೆಲಸ ಮಾಡುತ್ತಿರುವವರು ವಾಸಿಸುತ್ತಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ವಸತಿ ಕಾರ್ಯಾಗಾರ ಪರಭಾರೆಗೆ ಅವಕಾಶ ಇಲ್ಲದಂತೆ ಫ‌ಲಾನುಭವಿಗಳ ಹೆಸರಿಗೆ ನೋಂದಣಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಏತ ನೀರಾವರಿ ನಿರ್ವಹಣೆ ಖಾಸಗಿಗೆ: ರಾಜ್ಯದಲ್ಲಿ ಏತ ನೀರಾವರಿ ಯೋಜನೆಗಳ ನಿರ್ವಹಣೆ ಹೊರ ಗುತ್ತಿಗೆ ನೀಡಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಬೃಹತ್‌ ನೀರಾವರಿ ಯೋಜನೆಗಳ ವ್ಯಾಪ್ತಿಗೆ ಬರುವ ಏತ ನೀರಾವರಿ ಯೋಜನೆಗಳ ನಿರ್ವಹಣೆ ಸಮರ್ಪಕವಾಗಿ ನಡೆಯದ ಕಾರಣ ಇಡೀ ನಿರ್ವಹಣೆ ಹೊರ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ನೀತಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

2 ವರ್ಷ ವಯೋಮಿತಿ ಸಡಿಲ:

ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿ ಬೋಧನೆಗೆ 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ನಿಯಮಾವಳಿ ಸಡಿಲಗೊಳಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಅಷ್ಟೇ ಅಲ್ಲದೇ, ಒಂದು ಬಾರಿಗೆ ಅನ್ವಯವಾಗುವಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ತಲಾ 2 ವರ್ಷಗಳ ವಯೋಮಿತಿ ಸಡಿಲಿಸಲಾಗಿದೆ.

2017ರ ಸಿಇಟಿಯಲ್ಲಿ 10 ಸಾವಿರ ಹುದ್ದೆಗಳಿಗೆ ಕೇವಲ 3,389 ಮತ್ತು 2019ರಲ್ಲಿ 10,565 ಹುದ್ದೆಗಳಿಗೆ 1,994 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಿ ಪರೀಕ್ಷೆ ನಡೆಸಿತ್ತು. ಸಿಇಟಿ ಪರೀಕ್ಷೆ ಪತ್ರಿಕೆ-2ರಲ್ಲಿ ಈ ವರೆಗೆ ಅರ್ಹತೆ ಪಡೆಯಲು ಇದ್ದ ಶೇ.50 ಅಂಕಗಳನ್ನು ಶೇ.45 ಅಂಕಗಳಿಗೆ ಹಾಗೂ ಪತ್ರಿಕೆ-3ರಲ್ಲಿ ಶೇ.60 ಇದ್ದ ಅರ್ಹತಾ ಅಂಕವನ್ನು ಶೇ.50ಕ್ಕೆ ಇಳಿಸಿತ್ತು. ಸಿಇಟಿ ಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳು ಮೂರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪತ್ರಿಕೆ-1 ಸಾಮಾನ್ಯ ಜ್ಞಾನ 150 ಅಂಕಗಳಿರಲಿದ್ದು, ಬಹು ಆಯ್ಕೆ ಮಾದರಿಯಲ್ಲಿರುತ್ತದೆ. ಈ ಪರೀಕ್ಷೆಯಲ್ಲಿ ಯಾವುದೇ ಕನಿಷ್ಠ ಅರ್ಹತೆ ಪಡೆಯುವ ಅಗತ್ಯವಿಲ್ಲ. ಆದರೆ, ಒಟ್ಟಾರೆ ಅಂಕಗಳನ್ನು ಪರಿಗಣಿಸುವ ವೇಳೆ ಪದವಿ, ಬಿಇಡಿ, ಟಿಇಟಿ ಮತ್ತು ಸಿಇಟಿ ಅಂಕಗಳನ್ನು ರ್‍ಯಾಂಕ್‌ ಪಟ್ಟಿಗೆ ಪರಿಗಣಿಸಲಾಗುತ್ತದೆ.

ಇತರೆ ಪ್ರಮುಖ ತೀರ್ಮಾನ :

  • ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣ.
  • ಉಡುಪಿ ಜಿಲ್ಲೆ ಬೈಂದೂರು ತಾಲೂಕು ಪಡುವರಿ ಗ್ರಾಮದ ಸುಬ್ಬರಾಡಿ ಬಳಿ 47.47 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ
  • ರಾಯಚೂರು ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಕಲ್ಪಿಸಲು 15 ಕೋಟಿ ರೂ.
  • ಕಲಬುರಗಿ ಜಿಲ್ಲೆ ಚಿಂಚೋಳಿಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಮೀಸಲು ಕ್ಷೇತ್ರ ನಿಗದಿ
  • ಕರ್ನಾಟಕ ಕೃಷಿ ಸೇವೆ (ನೇಮಕಾತಿ) ತಿದ್ದುಪಡಿ ನಿಯಮಕ್ಕೆ ಅನುಮೋದನೆ