ಲಿಂಗಾಯತರಿಗೆ ಹೆಚ್ಚು ಟಿಕೆಟ್: ಎಚ್‌ಡಿಕೆ ಭರವಸೆ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಲಿಂಗಾಯತ ಮುಖಂಡರೊಂದಿಗೆ ಪಕ್ಷದ ಕಚೇರಿಯಲ್ಲಿ ಭಾನುವಾರ ಸಭೆ ನಡೆಸಿದ ಅವರು, 'ಉತ್ತರ ಕರ್ನಾಟಕಕ್ಕೆ ನಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಯೋಜನೆಗಳನ್ನು ನೀಡಲಾಗಿದೆ.
'ಲಿಂಗಾಯತ ಸಮುದಾಯದ ಮುಖಂಡರು ಈಗ ಜೆಡಿಎಸ್‌ನತ್ತ ಆಸಕ್ತಿ ತೋರುತ್ತಿರುವುದು ಕಂಡು ಸಂತೋಷವಾಗಿದೆ. ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೂ ಸಂತಸವಾಗಿದೆ. ಚುನಾವಣೆಯಲ್ಲಿ ಈ
ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು' ಎಂದು ಹೇಳಿದರು.
ಎಚ್.ಡಿ. ದೇವೇಗೌಡ ಮಾತನಾಡಿ, 'ಅಧಿಕಾರದಲ್ಲಿ ಇದ್ದಾಗ ನಾನು ಮತ್ತು ಕುಮಾರಸ್ವಾಮಿ ಯಾವ ಸಮುದಾಯಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು' ಎಂದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕರಾದ ವೆಂಕಟರಾವ್ ನಾಡಗೌಡ, ಲಿಂಗೇಶ್, ಮುಖಂಡರಾದ ಶಿವಶಂಕರ್, ಬಿ.ಜಿ. ಪಾಟೀಲ, ಲೀಲಾದೇವಿ ಆರ್. ಪ್ರಸಾದ್, ಪಕ್ಷದ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಸಭೆಯಲ್ಲಿದ್ದರು.
'ಸಚಿವರಿಂದ ಹಣದ ದಂಧೆ'
'ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಸಚಿವರೂ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ಕುರಿತು ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, '₹ 70 ಲಕ್ಷದಿಂದ ₹ 80 ಲಕ್ಷ ಕೊಟ್ಟು ಹುದ್ದೆ ಪಡೆದುಕೊಂಡು ಮೂರು ತಿಂಗಳೊಳಗೆ ಅಮಾನತು ಮಾಡಲಾಗಿದೆ. ಅದೇ ನೋವಿನಲ್ಲಿ ನಂದೀಶ್ ಮೃತಪಟ್ಟಿರಬಹುದು. ಆ ಹಣದಲ್ಲಿ ಸ್ಥಳೀಯ ಶಾಸಕರಿಗೆ ಎಷ್ಟು ತಲುಪಿದೆ? ಉಳಿದವರಿಗೆ ಎಷ್ಟು ಹೋಗಿದೆ? ಎಂಬುದರ ತನಿಖೆ ನಡೆಯಲಿ' ಎಂದು ಆಗ್ರಹಿಸಿದರು.
'ನಂದೀಶ್ ವರ್ಗಾವಣೆಗೆ ಲಂಚ ಕೊಟ್ಟಿರುವ ಕುರಿತು ಸಚಿವ ಎಂ.ಟಿ.ಬಿ. ನಾಗರಾಜ್ ನೀಡಿರುವ ಹೇಳಿಕೆಯ ವಿಡಿಯೊ ಜಗಜ್ಜಾಹೀರಾಗಿದೆ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಇನ್ನಾದರೂ ತನಿಖೆ ಮಾಡಿಸಲಿ' ಎಂದರು.
'ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಆಹ್ವಾನ ಅಲ್ಲಿನ ಮುಖಂಡರಿಂದ ಬಂದಿದೆ. ಆದರೆ, ನಾನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.