ಮೈಸೂರು ಗ್ಯಾಂಗ್‌ರೇಪ್ ಆರೋಪಿಗಳ ಬಂಧಿಸಿದ ಪೊಲೀಸರ ಕಾರ್ಯಾಚರಣೆಯೇ ರೋಚಕ

ಮೈಸೂರು ಗ್ಯಾಂಗ್‌ರೇಪ್ ಪ್ರಕರಣ:ಖತರ್ನಾಕ್ ಆರೋಪಿಗಳ ಬಂಧಿಸಿದ ಪೊಲೀಸರ ಕಾರ್ಯಾಚರಣೆಯೇ ರೋಚಕ
ಮೈಸೂರು: ಕರುನಾಡು ಬೆಚ್ಚಿಬೀಳುವಂತೆ ಮಾಡಿದ ಮೈಸೂರು ವಿದ್ಯಾರ್ಥಿನಿ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ನಡೆಸಿದ ಕಾರ್ಯಾಚರಣೆ ಕುತೂಹಲ ಮತ್ತು ರೋಚಕವಾಗಿದೆ.
ಆರೋಪಿಗಳ ಮಾಹಿತಿ ದೊರೆತರೂ ಸ್ಥಳಕ್ಕೆ ಹೋಗುವುದು ದೊಡ್ಡ ಸವಾಲಾಗಿದ್ದರಿಂದ ತಂತ್ರಗಾರಿಕೆ ಬಳಸಿದ ಪೊಲೀಸರು ರಾತ್ರಿಯಾಗುವ ತನಕ ಕಾದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ತಿರುಪುರ್‌ಗೆ ಬಂದಿರುವ ಸುಳಿವು ಆರೋಪಿಗಳಿಗೆ ಸಿಕ್ಕಿದ್ದರೆ ಪರಾರಿಯಾಗುವ ಸಂಭವವಿತ್ತು.
ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರ ಹಾಗೂ ಸಂತ್ರಸ್ತೆಯ ಸ್ನೇಹಿತ ನೀಡಿದ್ದ ಕೆಲವು ಮಾಹಿತಿ ತಾಳೆಯಾಗುತ್ತಿತ್ತು. ಆರೋಪಿಗಳು ತಮಿಳು ಭಾಷೆ ಮಾತನಾಡುತ್ತಿದ್ದರು. ಘಟನಾ ಸ್ಥಳದಲ್ಲಿ ತಾಳವಾಡಿ ಬಸ್ ಟಿಕೆಟ್ ಸಿಕ್ಕಿತ್ತು. ಮೊಬೈಲ್ ಟವರ್‌ನಲ್ಲಿ ಟ್ರೇಸ್ ಆಗಿದ್ದ ಮೊಬೈಲ್ ನಂಬರ್‌ನ ಸಿಮ್ ತಮಿಳುನಾಡಿನಲ್ಲಿ ಬಳಸಿದ್ದ ಸಿಮ್ ಒಂದೇ ಆಗಿತ್ತು. ಇದು ಆರೋಪಿಗಳು ತಮಿಳುನಾಡಿನವರು ಎಂಬುದನ್ನು ಬಲವಾಗಿ ದೃಢಪಡಿಸಿತ್ತು.
ಎರಡು ದಿನದಲ್ಲೇ ಜಾಡು ಪತ್ತೆ ಹಚ್ಚಿದ ಪೊಲೀಸರು: ಘಟನಾ ಸ್ಥಳದಲ್ಲಿ ಟ್ರೇಸ್ ಆಗಿದ್ದ ನಂಬರ್‌ಗಳ ಕಾಲ್ ಡಿಟೇಲ್ ರೆಕಾರ್ಡ್ ಪಡೆದುಕೊಂಡಿದ್ದ ಪೊಲೀಸರು ಈ ಮಾಹಿತಿ ಆಧರಿಸಿ ತಾಳವಾಡಿಗೆ ತೆರಳಿದ್ದರು.
ಆರೋಪಿ ಮೊಬೈಲ್ ಆನ್ ಮಾಡುವುದನ್ನೇ ಕಾಯುತ್ತಿದ್ದ ಸಿಡಿಆರ್ ವಿಭಾಗದ ಸಿಬ್ಬಂದಿ ಆರೋಪಿಯೊಬ್ಬರ ಮೊಬೈಲ್ ಆನ್ ಆಗುತ್ತಿದ್ದಂತೆ ಆರೋಪಿಗಳಲ್ಲಿ ಒಬ್ಬನಾದ ಭೂಪತಿ ಎಂಬಾತ ತಾಳವಾಡಿ ಫಿರ್ಕಾದ ಸುಸೈಪುರಂ ಗ್ರಾಮದಲ್ಲಿ ಇದ್ದಾನೆ ಎನ್ನುವುದು ತಿಳಿಯಿತು. ತಕ್ಷಣ ಅವರು ತಾಳವಾಡಿಯಲ್ಲಿ ಬೀಡು ಬಿಟ್ಟಿದ್ದ ಪೊಲೀಸರಿಗೆ ಮಾಹಿತಿ ನೀಡದರು. ಈತನ ಬಗ್ಗೆ ಸಂಜೆ ವೇಳೆಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರು ತಮಿಳುನಾಡಿನ ಪೊಲೀಸರನ್ನು ತಮ್ಮ ಜತೆಯಲ್ಲೇ ಕರೆದುಕೊಂಡು ಊರ ಹೊರಗೆ ಆರೋಪಿಗೆ ಕಾದಿದ್ದರು.
ರಾತ್ರಿ 11 ಗಂಟೆಯ ತನಕವೂ ಕಾದು ಕುಳಿತಿದ್ದ ಪೊಲೀಸರು ಜನರೆಲ್ಲ ಮಲಗುತ್ತಿದ್ದಂತೆ ಆರೋಪಿಯ ಮನೆಯನ್ನು ಸುತ್ತುವರಿದಿದ್ದಾರೆ. ನಂತರ ಮಲಗಿದ್ದವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಸೈಪುರಂನಲ್ಲಿ ಭೂಪತಿ ಸಿಕ್ಕಿಬೀಳುತ್ತಿದ್ದಂತೆ ಉಳಿದ ಆರೋಪಿಗಳು ತಿರುಪುರ್ ಪಕ್ಕದ ವೆಡಿಯಲೂರು ಎಂಬಲ್ಲಿ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರು ಈ ಮಾಹಿತನ್ನು ತಿರುಪುರದಲ್ಲಿದ್ದ ಮತ್ತೊಂದು ತಂಡಕ್ಕೆ ರವಾನಿಸಿದ್ದರು. ಅದರಂತೆ ವೆಡಿಯಲೂರು ಗ್ರಾಮದ ಶೆಡ್‌ನಲ್ಲಿ ಮಲಗಿದ್ದ ಮುರುಗೇಶ್, ಅರವಿಂದ್, ಜೋಸೆಫ್, ಅಪ್ರಾಪ್ತ ಬಾಲಕನನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಒಂದು ವೇಳೆ ಭೂಪತಿ ಸಿಗದೆ ಇದ್ದರೆ ಈ ನಾಲ್ವರ ಬಂಧನ ಮತ್ತಷ್ಟು ವಿಳಂಬವಾಗುತ್ತಿತ್ತು. ಪ್ರಕರಣದಲ್ಲಿ ಇನ್ನು ಇಬ್ಬರು ಭಾಗಿಯಾಗಿದ್ದು, ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.