ನ್ಯೂಸ್​ ಚಾನೆಲ್​ ಸ್ಟುಡಿಯೋಗೆ ನುಗ್ಗಿದ ತಾಲಿಬಾನಿಗಳು! ಆಯಂಕರ್​ಗೆ ಗನ್​ ತೋರಿಸಿ ಬಲವಂತವಾಗಿ ಸುದ್ದಿ ಓದಿಸಿದ್ರು

ನ್ಯೂಸ್​ ಚಾನೆಲ್​ ಸ್ಟುಡಿಯೋಗೆ ನುಗ್ಗಿದ ತಾಲಿಬಾನಿಗಳು! ಆಯಂಕರ್​ಗೆ ಗನ್​ ತೋರಿಸಿ ಬಲವಂತವಾಗಿ ಸುದ್ದಿ ಓದಿಸಿದ್ರು

ಕಾಬೂಲ್​: ಆಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳು, ಸುದ್ದಿ ವಾಹಿನಿಯೊಂದರ ಕಚೇರಿಗೂ ನುಗ್ಗಿ ಆಯಂಕರ್​ ಹಿಂಬದಿ ಗನ್​ ಹಿಡಿದು ನಿಂತು ತಮ್ಮ ಪರವಾಗಿ ಸುದ್ದಿ ಓದಿಸಿದ್ದಾರೆ. ಈ ದೃಶ್ಯ ವೈರಲ್​ ಆಗಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ದಕ್ಕೆ ತರುವುದಿಲ್ಲ ಎಂದಿದ್ದ ತಾಲಿಬಾನಿಗಳು ಇದೀಗ ಉಲ್ಟಾ ಹೊಡೆದಿದ್ದಾರೆ. 'ತಾಲಿಬಾನಿಗಳಿಗೆ ಹೆದರಬೇಡಿ. ಇಸ್ಲಾಮಿಕ್​ ಆಡಳಿತಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ' ಎಂದು ಆಯಂಕರ್​ ಮೂಲಕ ಬಲವಂತವಾಗಿ ಹೇಳಿಸಿದ್ದಾರೆ. ಇತ್ತೀಚಿಗೆ ಡಿಡಬ್ಲ್ಯು ನ್ಯೂಸ್​ ಚಾನೆಲ್​ನ ವರದಿಗಾರರನ್ನ ಹತ್ಯೆಗೈದಿದ್ದ ತಾಲಿಬಾನಿಗಳು, ತಮ್ಮ ವಿರುದ್ಧ ಸುದ್ದಿ ಮಾಡುವರನ್ನು ಗುಂಡಿಕ್ಕಿ ಕೊಲ್ಲಲು ಹವಣಿಸುತ್ತಿದ್ದಾರೆ.

ಶಾಂತಿ ನೆಲೆಸಿದ್ದ ಆಫ್ಘಾನ್​ ನಾಡು ಆ.15ರಂದು ತಾಲಿಬಾನಿಗಳು ವಶಪಡಿಸಿಕೊಂಡಾಗಿನಿಂದ ಸಾವಿನ ಮನೆಯಾಗಿದೆ. ನಿತ್ಯ ಮದ್ದು-ಗುಂಡುಗಳ ಆರ್ಭಟದಿಂದ ಜನರು ಮೃತ್ಯುವಿನ ನಡುವೆಯೇ ಜೀವಿಸುತ್ತಿದ್ದಾರೆ. ತಾಲಿಬಾನಿಗಳಿಂದ ಪ್ರಾಣ ಉಳಿಸಿಕೊಳ್ಳಲು ಆಫ್ಘಾನ್​ ತೊರೆಯಲು ಅಲ್ಲಿನ ಜನ ಕಾತರಿಸುತ್ತಿದ್ದಾರೆ.