ಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ಮೈಸೂರು, ಜೂನ್ 21: ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ವಸ್ತುಪ್ರದರ್ಶನ ಮೈದಾನದಲ್ಲಿಆಯೋಜಿಸಿದ್ದ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ವೀಕ್ಷಿಸಿದರು.

ವಸ್ತು ಪ್ರದರ್ಶನ ಮೈದಾನದ ಪ್ರವೇಶ ದ್ವಾರದಲ್ಲಿಯೇ ಡಿಜಿಟಲ್ ಯೋಗ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಆಯುಷ್‌ ಇಲಾಖೆಯು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿಈ ಡಿಜಿಟಲ್ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪ್ರತಿಯೊಂದು ಆಸನವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ದೃಶ್ಯ ಸಮೇತ ಮಾಹಿತಿ ನೀಡಲಾಗಿತ್ತು.

ಅರಮನೆ ಆವರಣದಲ್ಲಿ ಯೋಗಾಸನ ಮುಗಿಸಿಕೊಂಡು ನೇರವಾಗಿ ವಸ್ತು ಪ್ರದರ್ಶನ ಮೈದಾನಕ್ಕೆ ಬಂದ ಪ್ರಧಾನಿ ಡಿಜಿಟಲ್ ಯೋಗ ಪ್ರದರ್ಶನವನ್ನು ಉದ್ಘಾಟಿಸಿದರು. ಯೋಗ ಶಿಕ್ಷಣ ನೀಡುವ ಸಂಸ್ಥೆಗಳು, ಅಕಾಡೆಮಿಗಳ ಭರಪೂರ ಮಾಹಿತಿಯೊಂದಿಗೆ ದೇಶಿಯ ಉತನ್ನಗಳನ್ನು ಖುದ್ದು ಮೋದಿ ವೀಕ್ಷಿಸಿದರು.

143 ಮಳಿಗೆ ಸ್ಥಾಪನೆ; ಆಯುಷ್ ವಸ್ತು ಪ್ರದರ್ಶನದಲ್ಲಿ 143 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಯೋಗ ಶಿಕ್ಷಣ ಸಂಸ್ಥೆಗಳು, ಯೋಗ ಕಾಲೇಜು, ಯೋಗ ಚಿಕಿತ್ಸಾ ಕೇಂದ್ರ, ಆಸ್ಪತ್ರೆಗಳು, ಆಯುರ್ವೇದ ಔಷಧಿ ಕಂಪನಿಗಳಿಗೆ ಮಳಿಗೆಗಳನ್ನು ನೀಡಲಾಗಿದೆ.

ಸ್ವದೇಶಿ ಕಂಪೆನಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವು ಮಳಿಗೆಗಳಲ್ಲಿ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಯೋಗಾಸನದಿಂದ ಸಿಗುವ ಪ್ರಯೋಜನದ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನೀಡುತ್ತಿದೆ. ಎರಡು ದಿನ ಪ್ರದರ್ಶನ ವ್ಯವಸ್ಥೆ; ಆಯುಷ್‌ನ ಡಿಜಿಟಲ್ ಯೋಗ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದ್ದು, ಮಂಗಳರವಾರದಿಂದ ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಇರಲಿದೆ.  ಎರಡು ದಿನಗಳ ಈ ಆಯುಷ್ ಪ್ರದರ್ಶನವನ್ನು ಇನ್ನೊಂದು ವಾರಕ್ಕೆ ವಿಸ್ತರಿಸಲು ಆಯುಷ್‌ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಯೋಗ ಪ್ರದರ್ಶನ ಸದುಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ತಿಳಿಸಿದ್ದಾರೆ.