ಕೊಹ್ಲಿ, ರೋಹಿತ್ ಜೊತೆ ಎಲೈಟ್ ಪಟ್ಟಿಗೆ ಗಿಲ್ ಸೇರ್ಪಡೆ
ಅಹಮದಾಬಾದ್: ಯುವ ಭರವಸೆಯ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.
ಈ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಗಿಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಎಲ್ಲ ಮಾದರಿಗಳಲ್ಲೂ ಶತಕ ಸಾಧನೆ..
ಇದರೊಂದಿಗೆ ಶುಭಮನ್ ಗಿಲ್, ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲಿ (ಟ್ವೆಂಟಿ-20, ಏಕದಿನ, ಟೆಸ್ಟ್) ಶತಕ ಸಾಧನೆ ಮಾಡಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ, ಕೆ.ಎಲ್ ರಾಹುಲ್ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರಿದ್ದಾರೆ. ಅಲ್ಲದೆ ಭಾರತದ ಪರ ಈ ಸಾಧನೆ ಮಾಡಿದ ಐದನೇ ಬ್ಯಾಟರ್ ಎನಿಸಿದ್ದಾರೆ.
ಅತ್ಯಧಿಕ ವೈಯಕ್ತಿಕ ಸ್ಕೋರ್...
ಭಾರತದ ಪರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ದಾಖಲೆಗೂ ಗಿಲ್ ಭಾಜನರಾದರು.
63 ಎಸೆತಗಳನ್ನು ಎದುರಿಸಿದ ಗಿಲ್ 12 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 126 ರನ್ ಗಳಿಸಿ ಔಟಾಗದೆ ಉಳಿದರು.
2022ರಲ್ಲಿ ದುಬೈನಲ್ಲಿ ಅಫ್ಗಾನಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 122 ರನ್ ಗಳಿಸಿರುವುದು ಈವರೆಗಿನ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. 2017ರಲ್ಲಿ ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ಗಳಿಸಿದ್ದ 118 ರನ್ ಸಾಧನೆಯನ್ನು ಗಿಲ್ ಹಿಮ್ಮೆಟ್ಟಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್...
ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಹಿರಿಮೆಗೂ ಗಿಲ್ ಪಾತ್ರರಾದರು.
ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಗಿಲ್ ಚೊಚ್ಚಲ ದ್ವಿಶತಕ (208) ಗಳಿಸಿದ್ದರು.
54 ಎಸೆತಗಳಲ್ಲಿ ಶತಕ...
ಶುಭಮನ್ ಗಿಲ್ 54 ಎಸೆತಗಳಲ್ಲಿ ಚೊಚ್ಚಲ ಶತಕದ ಮೈಲಿಗಲ್ಲು ತಲುಪಿದರು. 35 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ದ ಗಿಲ್, ಬಳಿಕದ 50 ರನ್‌ಗಾಗಿ ಕೇವಲ 19 ಎಸೆತಗಳನ್ನಷ್ಟೇ ಎದುರಿಸಿದರು.
ಭಾರತ 234/4...
ಗಿಲ್ ಶತಕದ ಬೆಂಬಲದೊಂದಿಗೆ ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ನಾಲ್ಕು ವಿಕೆಟ್ ನಷ್ಟಕ್ಕೆ 234 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ರಾಹುಲ್ ತ್ರಿಪಾಠಿ 44, ನಾಯಕ ಹಾರ್ದಿಕ್ ಪಾಂಡ್ಯ 30, ಸೂರ್ಯಕುಮಾರ್ ಯಾದವ್ 24, ದೀಪಕ್ ಹೂಡಾ 2* ಮತ್ತು ಇಶಾನ್ ಕಿಶನ್ 1 ರನ್ ಗಳಿಸಿದರು.
ಈ ಪಂದ್ಯ ಗೆದ್ದರೆ ಸರಣಿ ಟೀಮ್ ಇಂಡಿಯಾದ ಪಾಲಾಗಲಿದೆ.