ಕಣ್ವ ಸೊಸೈಟಿ ವಂಚನೆ: ಕ್ಲೇಮ್​ಗೆ ಗ್ರಾಹಕರ ನೂಕುನುಗ್ಗಲು; ವಿವಿ ಟವರ್​ನಲ್ಲಿ ಅರ್ಜಿ ಸಲ್ಲಿಸಲು ಸಾವಿರಾರು ಜನರ ಕ್ಯೂ

ಕಣ್ವ ಸೊಸೈಟಿ ವಂಚನೆ: ಕ್ಲೇಮ್​ಗೆ ಗ್ರಾಹಕರ ನೂಕುನುಗ್ಗಲು; ವಿವಿ ಟವರ್​ನಲ್ಲಿ ಅರ್ಜಿ ಸಲ್ಲಿಸಲು ಸಾವಿರಾರು ಜನರ ಕ್ಯೂ

ಬೆಂಗಳೂರು: ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಕಣ್ವ ಸಮೂಹ ಸಂಸ್ಥೆಗಳ ವಂಚನೆ ಪ್ರಕರಣದ ಸಂಬಂಧ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಅರ್ಜಿ ಸ್ವೀಕಾರ ಪ್ರಕ್ರಿಯೆ ನ.2ರಿಂದ ಆರಂಭವಾಗಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಬಂದು ಕ್ಲೇಮ್ ಅರ್ಜಿ ಸಲ್ಲಿಸುತ್ತಿದ್ದು, ಬುಧವಾರವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಅರ್ಜಿ ಸಲ್ಲಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.

ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಬಡ್ಡಿ, ಲಾಭಾಂಶವಿರಲಿ ಹೂಡಿಕೆ ಮಾಡಿದ ಹಣವನ್ನೂ ಕೊಡದೆ ಏಕಾಏಕಿ ಕಚೇರಿಗೆ ಬೀಗ ಹಾಕಿತ್ತು. ಇದರಿಂದ ಸಾವಿರಾರು ಹೂಡಿಕೆದಾರರು ಬೀದಿಗೆ ಬಂದಿದ್ದು, ಕೂಡಿಟ್ಟ ಹಣ ಪಡೆದು ವಂಚಿಸಿದ ಕಣ್ವ ವಿರುದ್ಧ ದೂರು ನೀಡಿದ್ದರು.

ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಮತ್ತು ಕಣ್ವ ಗ್ರೂಪ್ ಆಫ್ ಕಂಪನೀಸ್ ವಿರುದ್ಧ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆ 2004 ಪ್ರಕರಣ ದಾಖಲಿಸಿಕೊಂಡಿದ್ದ ಸರ್ಕಾರ, ಇದರ ಅನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರನ್ನು ಸಕ್ಷಮ ಪ್ರಾಧಿಕಾರ ಅಧಿಕಾರಿಯಾಗಿ ನೇಮಕ ಮಾಡಿದೆ. ಇದೀಗ ಸಕ್ಷಮ ಪ್ರಾಧಿಕಾರ, ಕ್ಲೇಮ್ ಅರ್ಜಿಗಳನ್ನು ಸಲ್ಲಿಸಲು ಹೂಡಿಕೆದಾರರಿಗೆ ಸೂಚಿಸಿದ್ದು, ಡಿ.1ರ ಸಂಜೆ 5.30ಕ್ಕೆ ಕಡೇ ದಿನ ನಿಗದಿ ಮಾಡಿದೆ.

ಹೆಚ್ಚಿನ ಕೌಂಟರ್ ತೆರೆಯಲು ಒತ್ತಾಯ: ಬೆಂಗಳೂರಿನ ಡಾ. ಅಂಬೇಡ್ಕರ್ ರಸ್ತೆ ವಿಶ್ವೇಶ್ವರಯ್ಯ ಗೋಪುರ 3ನೇ ಮಹಡಿ ಪೋಡಿಯಂನಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿನಿತ್ಯ ನೂರಾರು ಹೂಡಿಕೆದಾರರು ಬಂದು ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ವಿತರಿಸಲು ಎರಡು ಕೌಂಟರ್ ತೆಗೆದಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಎಂಟು ಕೌಂಟರ್​ಗಳನ್ನು ತೆರೆಯಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಹೂಡಿಕೆದಾರರು ಬುಧವಾರ ಸಾಲುಗಟ್ಟಿ ನಿಂತಿದ್ದರು. ಬೆಳಗ್ಗೆ ಬಂದವರು ಸಂಜೆವರೆಗೂ ಕ್ಯೂನಲ್ಲಿ ನಿಲ್ಲಬೇಕಾಯಿತು. ಅರ್ಜಿ ಸ್ವೀಕರಿಸಲು ಮತ್ತಷ್ಟು ಕೌಂಟರ್​ಗಳನ್ನು ತೆರೆದರೆ ದೂರದಿಂದ ಬಂದಿರುವ ಜನರಿಗೆ ಅನುಕೂಲ ಆಗಲಿದೆ ಎಂದು ಹೂಡಿಕೆದಾರರು ಒತ್ತಾಯಿಸಿದ್ದಾರೆ.

ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ: ಠೇವಣಿದಾರರು ದಾಖಲೆಗಳನ್ನು ದೃಢೀಕರಿಸಬೇಕು. ಠೇವಣಿದಾರರು ಮರಣ ಹೊಂದಿದ್ದರೆ, ಡೆತ್​ನೋಟ್, ವಂಶ ವೃಕ್ಷ, ನಾಮಿನಿದಾರರು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು. ನಿಗದಿತ ದಿನಾಂಕದ ಒಳಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ವಸೂಲಿಯಲ್ಲಿ ನಿರ್ಲಕ್ಷ್ಯ: ಶ್ರೀಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸದಸ್ಯರು ಮತ್ತು ಸಾರ್ವಜನಿಕರಿಂದ 2019ರ ಮಾರ್ಚ್ ವೇಳೆಗೆ ಅಂದಾಜು 642.31 ಕೋಟಿ ರೂ. ಠೇವಣಿ ರೂಪದಲ್ಲಿ ಸಂಗ್ರಹಿಸಿತ್ತು. ಹಲವು ಕಂಪನಿಗಳು ಮತ್ತು ಸಂಸ್ಥೆಗಳಿಗೆ 416 ಕೋಟಿ ರೂ. ಸಾಲ ನೀಡಿತ್ತು. ಸಾಲ ವಸೂಲಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಆದ್ದರಿಂದ, ಸೊಸೈಟಿ ವಹಿವಾಟಿನ ಮೇಲೆ ಪರಿಣಾಮ ಬೀರಿ ಹೂಡಿಕೆದಾರರಿಗೆ ವಂಚನೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.