ಕನಿಷ್ಠ ವೇತನ ನೀಡದಿದ್ದರೆ ಎಫ್‌ಐಆರ್: ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ

ಮೈಸೂರು: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆ, ಕಾಲೇಜುಗಳಲ್ಲಿರುವ 'ಡಿ' ಗ್ರೂಪ್ ಹೊರಗುತ್ತಿಗೆ ನೌಕರರು, ಹೊರ ಸಂಪನ್ಮೂಲ ಸಿಬ್ಬಂದಿಗೆ ನಿಯಮಿತವಾಗಿ ವೇತನ ಮತ್ತು ಕನಿಷ್ಠ ವೇತನ ಪಾವತಿಯಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಂಥ ಏಜೆನ್ಸಿ/ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದೆ.
ಈ ಸಂಬಂಧ ಡಿ.28ರಂದು ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಇಲಾಖೆಯ ಆಯುಕ್ತರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ರವಾನಿಸಿದೆ. ಜಿಲ್ಲಾಮಟ್ಟದ ಜಂಟಿ/ಉಪನಿರ್ದೇಶಕರು, ಸಮನ್ವಯಾಧಿಕಾರಿಗಳೇ ಎಫ್‌ಐಆರ್ ದಾಖಲಿಸಬೇಕು ಎಂದೂ ಸ್ಪಷ್ಟ ಸೂಚನೆ ನೀಡಿದೆ.
ಮೈಸೂರಿನಲ್ಲಿ ಡಿ.17-18ರಂದು ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘವು ಆಯೋಜಿಸಿದ್ದ 'ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರಥಮ ರಾಜ್ಯ ಸಮ್ಮೇಳನ'ದ ಬಳಿಕ ಈ ಸುತ್ತೋಲೆ ಹೊರಬಿದ್ದಿರುವುದು ವಿಶೇಷ.
'ಕಾರ್ಮಿಕ ಇಲಾಖೆಯು ನಿಗದಿ ಪಡಿಸಿರುವ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ/ಗೌರವಧನ ಪಾವತಿಸುತ್ತಿರುವುದು ಕಂಡುಬಂದರೆ, ಅಂಥ ಏಜೆನ್ಸಿ, ಗುತ್ತಿಗೆದಾರರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಇಎಸ್‌ಐ/ಪಿಎಫ್ ಸೌಲಭ್ಯವನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ಸರಿಯಾಗಿ ಪಾವತಿಸಿದವರ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು' ಎಂದು ಸೂಚಿಸಲಾಗಿದೆ.
'ಹೆಚ್ಚುವರಿ ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳು ಹೆಚ್ಚಿರುವ ವಿದ್ಯಾರ್ಥಿನಿಲಯಗಳು, ವಸತಿ ಶಾಲೆ, ಕಾಲೇಜುಗಳಲ್ಲಿ ಇಬ್ಬರು ಅಡುಗೆಯವರು ಇದ್ದರೆ, ಹೆಚ್ಚುವರಿಯಾಗಿ ಇನ್ನೊಬ್ಬರನ್ನು ನೇಮಿಸಿಕೊಂಡು, ವಾರಕ್ಕೊಮ್ಮೆ ರಜೆ ಕೊಡಬೇಕು' ಎಂದೂ ಸುತ್ತೋಲೆ ತಿಳಿಸಿದೆ.
'ರಾತ್ರಿ ಕಾವಲುಗಾರರನ್ನು ಹಗಲು ಹೊತ್ತಿನಲ್ಲೂ ಬಳಸಿಕೊಳ್ಳುವುದಕ್ಕೆ ಕಡಿವಾಣ ಹಾಕಿದ್ದು, ಅವರು ರಾತ್ರಿ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕು' ಎಂದೂ ಸುತ್ತೋಲೆ ಸ್ಪಷ್ಟಪಡಿಸಿದೆ.
'ವಾರದ ರಜೆ ಕೊಡಬೇಕು, ಎಂಟು ಗಂಟೆ ಕಾಲವಷ್ಟೇ ಕೆಲಸ ಮಾಡಿಸಬೇಕೆಂಬ ಬೇಡಿಕೆಗಳು ಈಡೇರಿರಲಿಲ್ಲ. ಅಂತಿಮವಾಗಿ ಸರ್ಕಾರ ಈ ಬಗ್ಗೆಯೂ ಸುತ್ತೋಲೆ ಹೊರಡಿಸಿದ್ದು ಸ್ವಾಗತಾರ್ಹ' ಎಂದು ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಪ್ರತಿಕ್ರಿಯಿಸಿದರು.
'ಇದುವರೆಗೂ ರಾತ್ರಿ ಕಾವಲುಗಾರರಿಂದ ದಿನದ 24 ಗಂಟೆಯೂ ಕೆಲಸ ಮಾಡಿಸಲಾಗುತ್ತಿತ್ತು. ಅದಕ್ಕೂ ಕಡಿವಾಣ ಹಾಕಿದ್ದು ಸಂತಸದ ವಿಚಾರ' ಎಂದರು.
ಗಮನ ಸೆಳೆದ 'ಪ್ರಜಾವಾಣಿ' ವರದಿ
ಮೈಸೂರಿನಲ್ಲಿ ಡಿ.17-18ರಂದು ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘವು ಆಯೋಜಿಸಿದ್ದ 'ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರಥಮ ರಾಜ್ಯ ಸಮ್ಮೇಳನ'ದ ವರದಿಗಳ ಮೂಲಕ 'ಪ್ರಜಾವಾಣಿ' ಸರ್ಕಾರದ ಗಮನ ಸೆಳೆದಿದ್ದರಿಂದ ಈ ಸುತ್ತೋಲೆ ಹೊರಬೀಳುವಂತಾಯಿತು' ಎಂದು ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಅಭಿಪ್ರಾಯಪಟ್ಟರು.
ಎಫ್‌ಐಆರ್ ದಾಖಲಿಸಬೇಕು ಎಂಬ ನಿಯಮ ಅಸ್ತಿತ್ವದಲ್ಲಿದ್ದರೂ, ಜಾರಿಯಲ್ಲಿರಲಿಲ್ಲ. ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
-ಕೆ.ಸೋಮಶೇಖರ್ ಯಾದಗಿರಿ, ಅಧ್ಯಕ್ಷ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ