ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಜತೆಯಾದ ಗಣೇಶ್​; ಸದ್ಯದಲ್ಲೇ ಪ್ರಾರಂಭ

ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಜತೆಯಾದ ಗಣೇಶ್​; ಸದ್ಯದಲ್ಲೇ ಪ್ರಾರಂಭ

ಬೆಂಗಳೂರು: 'ಮಾಸ್​ ಲೀಡರ್​', 'ದಿ ವಿಲನ್​', 'ಟಗರು', 'ಬೈರಾಗಿ' ಹೀಗೆ ಇತ್ತೀಚಿನ ವರ್ಷಗಳಲ್ಲಿ ಹಲವು ಮಲ್ಟಿಸ್ಟಾರರ್​ ಚಿತ್ರಗಳಲ್ಲಿ ನಟಿಸಿರುವ ಶಿವರಾಜಕುಮಾರ್​, ಈಗ ಇನ್ನೊಂದು ಮಲ್ಟಿಸ್ಟಾರರ್​ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಅವರ ಜತೆಯಾಗುತ್ತಿರುವುದು ಗಣೇಶ್​.

ಶಿವರಾಜಕುಮಾರ್​ ಮತ್ತು ಗಣೇಶ್​ ಹಲವು ವರ್ಷಗಳ ಸ್ನೇಹಿತರಾದರೂ, ಇಬ್ಬರೂ ಇದುವರೆಗೂ ಜತೆಯಾಗಿ ನಟಿಸಿರಲಿಲ್ಲ. ಈ ವರ್ಷ ಅದಕ್ಕೆ ಕಾಲ ಕೂಡಿ ಬಂದಿದೆ. ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್​. ರವಿಕುಮಾರ್​ ನಿರ್ದೇಶಿಸುತ್ತಿರುವ ಕನ್ನಡ ಚಿತ್ರದಲ್ಲಿ ಇಬ್ಬರೂ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ನಿರ್ಮಿಸುತ್ತಿರುವುದು ಸೂರಪ್ಪ ಬಾಬು. 'ಕೋಟಿಗೊಬ್ಬ 3' ಸೋಲಿನ ನಂತರ ಚಿತ್ರ ನಿರ್ಮಾಣದಿಂದ ದೂರವೇ ಇದ್ದ ಬಾಬು, ಈಗ ಎರಡು ಚಿತ್ರಗಳೊಂದಿಗೆ ವಾಪಸ್ಸಾಗುತ್ತಿದ್ದಾರೆ. ಅದರಲ್ಲೊಂದು ಶಿವರಾಜಕುಮಾರ್ ಮತ್ತು ಗಣೇಶ್​ ಅಭಿನಯದ ಚಿತ್ರ. ಈ ಹಿಂದೆ ಬಾಬು ನಿರ್ಮಾಣದ 'ಕೋಟಿಗೊಬ್ಬ 2' ಚಿತ್ರವನ್ನು ಕೆ.ಎಸ್​. ರವಿಕುಮಾರ್​ ನಿರ್ದೇಶಿಸಿದ್ದರು. ಈಗ ಪುನಃ ರವಿಕುಮಾರ್​ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಬಾಬು. ರಾಂಬಾಬು ಪ್ರೊಡಕ್ಷನ್ಸ್​ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರ ಜೂನ್​ನಿಂದ ಪ್ರಾರಂಭವಾಗಲಿದೆಯಂತೆ.

ಇನ್ನೂ ಓದಿ ಶಿವರಾಜಕುಮಾರ್​ ಸದ್ಯ 'ಘೋಸ್ಟ್​' ಮತ್ತು 'ಕರಟಕ ದಮನಕ' ಅಲ್ಲದೆ, ತಮಿಳೀನ 'ಜೈಲರ್​' ಮತ್ತು 'ಕ್ಯಾಪ್ಟನ್​ ಮಿಲ್ಲರ್​' ಚಿತ್ರಗಳಲ್ಲಿ ನಟಿಸುತ್ತಿದ್ದು, ಅದಲ್ಲದೆ, '45', 'ಅಶ್ವತ್ಥಾಮ', 'ಬೈರತಿ ರಣಗಲ್​' ಮುಂತಾದ ಚಿತ್ರಗಳನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ. ಈ ಸಾಲಿಗೆ ಈಗ ಗಣೇಶ್​ ಜತೆಗೆ ನಟಿಸುತ್ತಿರುವ ಹೊಸ ಚಿತ್ರವೂ ಸೇರ್ಪಡೆಯಾಗಿದೆ.