ಕೋಟ್ಯಂತರ ರೂ. ಆಸ್ತಿಗೆ ನಕಲಿ ದಾಖಲೆ ಸೃಷ್ಟಿ: ಗ್ರಾಮ ಸಹಾಯಕ ಸೇರಿ ಐವರ ಬಂಧನ

ಕೋಟ್ಯಂತರ ರೂ. ಆಸ್ತಿಗೆ ನಕಲಿ ದಾಖಲೆ ಸೃಷ್ಟಿ: ಗ್ರಾಮ ಸಹಾಯಕ ಸೇರಿ ಐವರ ಬಂಧನ

ಕೋಟ್ಯಂತರ ರೂ. ಆಸ್ತಿಗೆ ನಕಲಿ ದಾಖಲೆ ಸೃಷ್ಟಿ: ಗ್ರಾಮ ಸಹಾಯಕ ಸೇರಿ ಐವರ ಬಂಧನ

ಮೈಸೂರು: ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಕಬಳಿಸುವ ಹುನ್ನಾರದಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ವ್ಯಕ್ತಿ ಹಾಗೂ ದಾಖಲೆಗಳನ್ನು ಸೃಷ್ಟಿಸಿದ್ದ ಗ್ರಾಮ ಸಹಾಯಕ ಸೇರಿ ಐವರನ್ನು ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ರಮ್ಮನಹಳ್ಳಿ ಗ್ರಾಮ ಸಹಾಯಕ ಸಿದ್ದಯ್ಯ, ಪತ್ರ ಬರಹಗಾರ ಚಿನ್ನಸ್ವಾಮಿ, ಬ್ರೋಕರ್ ಬಾಬು, ಸಾಕ್ಷಿಗೆ ಸಹಿ ಹಾಕಿದ್ದ ಮಂಚಪ್ಪ ಹಾಗೂ ಸುಶೀಲಾ ಎಂಬವರನ್ನು ಬಂಧಿಸಿರುವ ಎನ್.ಆರ್. ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಅಕ್ರಮವನ್ನು ಆರ್‌ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬೆಳಕಿಗೆ ತಂದಿದ್ದರು.
ನಡೆದದ್ದಾದರೂ ಏನು?
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ ೨೪೪/೨ ರ ೪ ಎಕರೆ ೪ ಗುಂಟೆ ಜಮೀನು ಇಡುವಳಿ ಜಮೀನಿನ ಮೇಲೆ ಖದೀಮರು ಕಣ್ಣು ಬಿದ್ದಿದೆ. ಇದು ಎ.ಚೆಲುವರಾಜ್ ಅಲಿಯಾಸ್ ಸೆಲ್ವರಾಜ್ ಎಂಬುವರಿಗೆ ಸೇರಿದ ಸ್ವತ್ತಾಗಿದೆ. ಚೆಲುವರಾಜು ನಗರದ ಎನ್.ಆರ್.ಮೊಹಲ್ಲಾದ ಗಾಣಿಗರ ಬೀದಿ ನಿವಾಸಿ. ಇವರು ೨೮-೮-೧೯೮೬ ರಲ್ಲಿ ಮರಣ ಹೊಂದಿದ್ದಾರೆ. ಇವರ ಹೆಸರಿನಲ್ಲಿರುವ ಜಮೀನನ್ನು ಕಬಳಿಸಲು ಭೂ ಮಾಫಿಯಾ ಹುನ್ನಾರ ನಡೆಸಿದೆ ಎಂದು ನಾಗೇಂದ್ರ ಆರೋಪಿಸಿದ್ದರು.
ಚೆಲುವರಾಜ್, ೨೦೨೦ರಲ್ಲಿ ತಮ್ಮ ಮಗಳು ಲಕ್ಷ್ಮಮ್ಮ ಎಂಬುವವರಿಗೆ ದಾನಪತ್ರ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಚೆಲುವರಾಜ್ ೨೦೧೯ರಲ್ಲಿ ಬಂದು ದಾಖಲೆಗಳಿಗೆ ಹೆಬ್ಬೆಟ್ಟಿನ ಗುರುತು ಹಾಗೂ ಸಹಿ ಹಾಕಿದಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ದಾಖಲೆಗಳಿಗೆ ಮೈಸೂರು ತಾಲೂಕಿನ ಭೂಮಾಪಕರು ಧೃಢೀಕರಿಸಿದ್ದು ಗ್ರಾಮ ಸಹಾಯಕ ಸಾಕ್ಷಿಯಾಗಿದ್ದಾರೆ.

ಅನುಮಾನ ಬಂದಿದ್ದು ಹೇಗೆ?

ಮೈಸೂರು ತಾಲ್ಲೂಕು ಕಚೇರಿಯಲ್ಲಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ದಾನಪತ್ರ ವೇಳೆ ಎ.ಚೆಲುವರಾಜ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಲಕ್ಷ್ಮಮ್ಮ ಹಾಗೂ ಸಾವಿತ್ರಮ್ಮ ಅವರನ್ನು 'ನನ್ನ ಮಗಳು' ಎಂದು ಉಲ್ಲೇಖಿಸಿರುವ ಅಂಶವೂ ಅನುಮಾನಕ್ಕೆ ಕಾರಣವಾಗಿದೆ.
೨೦-೧-೨೦೨೦ರಲ್ಲಿ ಲಕ್ಷ್ಮಮ್ಮ ಹೆಸರಿಗೆ ದಾನಪತ್ರ ನೊಂದಣಿಯಾಗಿದೆ. ೧೪-೮-೨೦೨೦ ರಲ್ಲಿ ಲಕ್ಷ್ಮಮ್ಮ ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ತಂದೆ ಹೆಸರು ಜಯರಾಮು ಎಂದು ನಮೂದಾಗಿದೆ. ಆದರೆ ದಾನಪತ್ರದಲ್ಲಿ ಇದೇ ಲಕ್ಷ್ಮಮ್ಮ ಅವರ ತಂದೆ ಎ.ಚೆಲುವರಾಜು ಎಂದು ಸ್ವಯಂ ಧೃಢೀಕರಣ ಮಾಡಲಾಗಿದೆ. ಒಬ್ಬ ವ್ಯಕ್ತಿಗೆ ಇಬ್ಬರು ತಂದೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಇಲ್ಲಿ ಮೂಡಿದೆ.

ಈ ನಡುವೆ, ಎ.ಚೆಲುವರಾಜ್ ವಂಶಸ್ಥರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅವರು ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸಿಲ್ದಾರ್‌ಗೆ ಈ ಅಕ್ರಮದ ಬಗ್ಗೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.