ಮೇಕೆದಾಟು ಯೋಜನೆ ಜಾರಿ, ಕಾಂಗ್ರೆಸ್‌ನಿಂದ ಪಾದಯಾತ್ರೆ

ಮೇಕೆದಾಟು ಯೋಜನೆ ಜಾರಿ, ಕಾಂಗ್ರೆಸ್‌ನಿಂದ ಪಾದಯಾತ್ರೆ

ಬೆಂಗಳೂರು, ನವೆಂಬರ್ 08;ಮೇಕೆದಾಟುಯೋಜನೆ ಜಾರಿಗೊಳಿಸುವುದು ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಸವಾಲಾಗಿದೆ.

ತಮಿಳುನಾಡು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಇತ್ತ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಜ್ಜಾಗಿದೆ.

ಕರ್ನಾಟಕ ಸರ್ಕಾರ ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮೇಕೆದಾಟುವಿನಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಡಿಸೆಂಬರ್ ಮೊದಲ ವಾರದಲ್ಲಿ ಪಾದಯಾತ್ರೆ ಆರಂಭವಾಗಲಿದೆ.

ಮೇಕೆದಾಟು ಯೋಜನೆ; ಮತ್ತೊಮ್ಮೆ ನಿಲುವು ಸ್ಪಷ್ಟಪಡಿಸಿದ ಸಿಎಂ

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಮಾಹಿತಿ ನೀಡಿದರು. 100 ಕಿ. ಮೀ. ಪಾದಯಾತ್ರೆಯಲ್ಲಿ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಮೇಕೆದಾಟು ಯೋಜನೆ; ಮೇಕೆದಾಟುವಿನಿಂದ ವಿಧಾನಸೌಧ ತನಕ ಪಾದಯಾತ್ರೆ

ಡಿ. ಕೆ. ಶಿವಕುಮಾರ್ ಮಾತನಾಡಿ, "ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಕೆ ಮಾಡಲು ರಾಜ್ಯದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಯೋಜನೆ ಇದಾಗಿದೆ. ಇದಕ್ಕೆ ಯಾರ ಅನುಮತಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಏಳು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತಿದೆ" ಎಂದರು.

ಮೇಕೆದಾಟು ಯೋಜನೆ; ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದ ಕುಮಾರಸ್ವಾಮಿ


ಡಿಸೆಂಬರ್ ಮೊದಲ ವಾರ ಪಾದಯಾತ್ರೆ

ಕಾಂಗ್ರೆಸ್ ಮೇಕೆದಾಟುವಿನಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಸಿ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದೆ.

"ಕಾವೇರಿ ನ್ಯಾಯಾಧೀಕರಣದ ಐತೀರ್ಪಿನ ಪ್ರಕಾರ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಸಮುದ್ರ ಸೇರುತ್ತಿದೆ. ಅದನ್ನು ಬಳಸಿಕೊಳ್ಳಲು ಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಬೇಕು ಎಂಬುದು ನಮ್ಮ ಬೇಡಿಕೆ. ಡಿಸೆಂಬರ್ ಮೊದಲ ವಾರದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡುತ್ತೇವೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ ಹೇಳಿದ್ದೇನು?

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, "ಮೇಕೆದಾಟು ಯೋಜನೆಯನ್ನು ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದೆ. ಈ ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ. ಕಾನೂನು ತೊಡಕುಗಳು ಇಲ್ಲದ ಈ ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣ ಆರಂಭಿಸಬೇಕು" ಎಂದು ಒತ್ತಾಯಿಸಿದರು.

"ಯೋಜನೆಗೆ ನ್ಯಾಯಾಲಯದ ಯಾವುದೇ ತಕರಾರುಗಳಿಲ್ಲ. ಕೇಂದ್ರ ಪರಿಸರ ಇಲಾಖೆಯು ತಕ್ಷಣವೇ ಯೋಜನೆಗೆ ಅನುಮತಿ ಪತ್ರ ನೀಡಬೇಕು. ರಾಜ್ಯ ಸರ್ಕಾರ ವಿಳಂಬ ಮಾಡದೇ ಯೋಜನೆ ಅನುಷ್ಠಾನ ಮಾಡಬೇಕು" ಎಂದು ಸಿದ್ದರಾಮಯ್ಯ ಹೇಳಿದರು.

ಚುನಾವಣೆಗಾಗಿ ಪಾದಯಾತ್ರೆ ಅಲ್ಲ

"ಕಾಂಗ್ರೆಸ್ ಪಾದಯಾತ್ರೆಯನ್ನು ಚುನಾವಣೆ, ಮತಗಳಿಕೆ ಉದ್ದೇಶದಿಂದ ನಡೆಸುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಯೋಜನೆಯ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಆದರೆ ಕೇಂದ್ರ ಒಪ್ಪಿಗೆ ನೀಡದ ಕಾರಣ ಯೋಜನೆ ಆರಂಭಿಸಿರಲಿಲ್ಲ. ನಾವು ಕನ್ನಡಿಗರು ಮತ್ತು ಕರ್ನಾಟಕದ ಪರ ಇದ್ದೇವೆ. ಮೇಕೆದಾಟು ಯೋಜನೆ ಶೀಘ್ರದಲ್ಲೇ ಜಾರಿಯಾಗಬೇಕು ಎಂಬುದು ನಮ್ಮ ಬೇಡಿಕೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳು ಹೇಳುವುದೇನು?

ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಈ ಕುರಿತು ಮಾತನಾಡಿದ್ದ ಅವರು, "ಮೇಕೆದಾಟು ಯೋಜನೆ ಮಾಡುವುದು ನಮ್ಮ ಕೈಯಲ್ಲಿ ಇದೆ. ನಮ್ಮ ನಿಲುವಿಗೆ ನಮ್ಮ ಸರಕಾರ ಬದ್ಧವಾಗಿದೆ. ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ನಿಲುವು ಗೊತ್ತಿರುವ ವಿಚಾರ. ಅವರು ರಾಜಕಾರಣವನ್ನು ಬೆರೆಸುತ್ತಾರೆ" ಎಂದು ಹೇಳಿದ್ದರು.

"ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ನಿಲುವು ಬದಲಾಗುವುದಿಲ್ಲ. ತಮಿಳುನಾಡಿಗೆ ಯಾವುದೇ ತೀರ್ಮಾನ ಮಾಡಲು ಅಧಿಕಾರ ಇಲ್ಲ, ಕಾನೂನಾತ್ಮಕ ಹೋರಾಟದಿಂದ ಮೇಕೆದಾಟು ಯೋಜನೆ ಹಾಗೆಯೇ ಆಗುತ್ತದೆ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದರು.

ಕಾವೇರಿ ನ್ಯಾಯಾಧೀಕರಣದ ತೀರ್ಪು

ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅನ್ವಯ ಕಾವೇರಿ ನದಿ ಪಾತ್ರದಲ್ಲಿ ಯಾವುದೇ ಯೋಜನೆ ಜಾರಿಗೊಳಿಸಲು ನದಿ ಪಾತ್ರದ ಎಲ್ಲಾ ರಾಜ್ಯಗಳ ಒಪ್ಪಿಗೆ ಪಡೆಯಬೇಕು. ಆದ್ದರಿಂದ ನದಿ ಪಾತ್ರದ ರಾಜ್ಯಗಳ ಒಪ್ಪಿಗೆ ಇಲ್ಲದೇ ಮೇಕೆದಾಟು ಯೋಜನೆ ಜಾರಿಗೊಳಿಸುವುದು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರದ ಈ ಯೋಜನೆಗೆ ತಮಿಳುನಾಡು, ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯಬೇಕಾಗಿದೆ.

ಆದರೆ ಎರಡೂ ರಾಜ್ಯಗಳು ಯೋಜನೆ ವಿರೋಧಿಸುತ್ತಿವೆ. ಕರ್ನಾಟಕ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಆದ್ದರಿಂದ ಯೋಜನೆಗೆ ಇರುವ ತೊಡಕು ನಿವಾರಿಸಿ ಯೋಜನೆ ಜಾರಿಗೊಳಿಸಿ ಎಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ.

ಕೇಂದ್ರ ಸರ್ಕಾರ ಹೇಳಿದ್ದೇನು?

ಲೋಕಸಭೆ ಅಧಿವೇಶನದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಆಗ ಉತ್ತರಿಸಿದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, "ಮೇಕೆದಾಟು ಯೋಜನೆ ಡಿಪಿಆರ್‌ಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ. ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯಬೇಕು. ಕರ್ನಾಟಕ ಡಿಪಿಆರ್‌ ಸಲ್ಲಿಕೆ ಮಾಡಿದಾಗಲೇ ಇದನ್ನು ಸ್ಪಷ್ಟಪಡಿಸಲಾಗಿತ್ತು" ಎಂದು ಹೇಳಿದ್ದರು.