ಚಿತ್ರ ಬಿಡುಗಡೆ ಬೆನ್ನಲ್ಲೇ ಕೋಟಿ ಗಳಿಕೆ ಪೋಸ್ಟ್: ಮಲಯಾಳಂ ಇಂಡಸ್ಟ್ರಿಗೆ IT ಶಾಕ್, 225 ಕೋಟಿ ರೂ. ಕಪ್ಪುಹಣ ಪತ್ತೆ

ಕೊಚ್ಚಿ: ಮಲಯಾಳಂ ಸಿನಿಮಾ ನಿರ್ಮಾಣ ವಲಯದಲ್ಲಿ ಬರೋಬ್ಬರಿ 225 ಕೋಟಿ ರೂ. ಕಪ್ಪುಹಣದ ವ್ಯವಹಾರ ನಡೆದಿರುವುದು ಕಂಡುಬಂದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ ವೇಳೆ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ.
ಡಿಸೆಂಬರ್ 15ರಿಂದ ಮಲಯಾಳಂನ ಸೂಪರ್ಸ್ಟಾರ್ಸ್ ಮತ್ತು ಮುಂಚೂಣಿ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದೆ.
ನಿನ್ನೆಯಷ್ಟೇ ಐಟಿ ಅಧಿಕಾರಿಗಳು ನಟ ಮೋಹನ್ ಲಾಲ್ ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಮೋಹನ್ ಲಾಲ್, ಮಮ್ಮುಟ್ಟಿ, ಪೃಥ್ವಿರಾಜ್, ಲಿಸ್ಟಿನ್ ಸ್ಟೀಫನ್, ಆಂಟನ್ ಜೋಸೆಫ್, ಆಂಥೋನಿ ಪೆರುಂಬವೂರ್ ಮುಂತಾದ ಮಲಯಾಳಂ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಜನರ ಹಣಕಾಸು ವಹಿವಾಟು ಮತ್ತು ನಿರ್ಮಾಣ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳ ತನಿಖೆ ಕೇಂದ್ರಿಕೃತವಾಗಿದೆ.
ಕೆಲವು ನಟರು ಹಾಗೂ ನಿರ್ಮಾಪಕರು ದುಬೈ ಮತ್ತು ಕತಾರ್ನಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ತಾವು ನಿರ್ಮಿಸಿರುವ ಚಿತ್ರಗಳ ಸಾಗರೋತ್ತರ ವಿತರಣಾ ಹಕ್ಕುಗಳ ನೆಪದಲ್ಲಿ ವಿದೇಶಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಆದಾಯ ತೆರಿಗೆ ಇಲಾಖೆಯು ಕೆಲವರ ವಿದೇಶಿ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸುವುದನ್ನು ಮುಂದುವರೆಸಿದೆ. ಕೆಲವು ತಮಿಳು ಚಲನಚಿತ್ರ ನಿರ್ಮಾಪಕರು ಬೇನಾಮಿ ವ್ಯವಹಾರಗಳ ಅಡಿಯಲ್ಲಿ ಮಲಯಾಳಂ ಚಿತ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಗುರುತಿಸಲಾಗಿದೆ.
ಚಿತ್ರ ಬಿಡುಗಡೆಯಾಗಿ ಎರಡು ವಾರ ಕಳೆಯುವ ಮುನ್ನವೇ ಐವತ್ತರಿಂದ ಎಪ್ಪತ್ತು ಕೋಟಿ ಕಲೆಕ್ಷನ್ ಆಗಿದೆ ಎಂದು ಕೆಲ ನಿರ್ಮಾಪಕರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದರ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)