ಕರಾವಳಿಯಲ್ಲಿ ಕಮಲ ಪಾಳಯಕ್ಕೆ ಸವಾಲಾದ ಹಿಂದುತ್ವದ ಭಿನ್ನಸ್ವರ; ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆಗೆ ಸಿದ್ಧತೆ

ಕರಾವಳಿಯಲ್ಲಿ ಕಮಲ ಪಾಳಯಕ್ಕೆ ಸವಾಲಾದ ಹಿಂದುತ್ವದ ಭಿನ್ನಸ್ವರ; ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆಗೆ ಸಿದ್ಧತೆ

| ಶ್ರವಣ್​ಕುಮಾರ್ ನಾಳ ಮಂಗಳೂರು

ರಾವಳಿಯ ಹಿಂದುತ್ವದ ಭದ್ರಕೋಟೆ ಎಂದೇ ಪ್ರಸಿದ್ಧಿ ಪಡೆದ ಕಾರ್ಕಳ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಧರ್ಮ ಸಂಕಟ ಎದುರಾಗಿದೆ. ಕಳೆದ ಹಲವು ವರ್ಷಗಳಿಂದ ಹಿಂದುತ್ವದ ಟ್ರಂಪ್ ಕಾರ್ಡ್ ಬಳಸಿಕೊಂಡೇ ಗೆಲುವಿನ ಪತಾಕೆ ಹಾರಿಸುತ್ತಿರುವ ಪಕ್ಷಕ್ಕೆ ಪ್ರಖರ ಹಿಂದುತ್ವವಾದಿಗಳು ಮುನಿಸಿಕೊಂಡಿರುವುದು ನುಂಗಲಾರದ ತುತ್ತಾಗಿದೆ.

ಕಾರ್ಕಳವು 40 ವರ್ಷ ಕಾಲ ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. ಇಲ್ಲಿಂದ ಆಯ್ಕೆಯಾಗಿದ್ದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. ಇಂಥ ಕ್ಷೇತ್ರದಲ್ಲಿ ಬಿಜೆಪಿ 2004ರಲ್ಲಿ ಪ್ರಥಮ ಜಯ ದಾಖಲಿಸಿತ್ತು. ಅಂತೆಯೆ, 1994ರಿಂದಲೇ ಸಂಘಪರಿವಾರದ ಭದ್ರಕೋಟೆಯಾಗಿರುವ ಪುತ್ತೂರನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ನಿರಂತರ ಪ್ರಯತ್ನಿಸುತ್ತಿದ್ದರೂ 2013ರಲ್ಲಿ ಹೊರತುಪಡಿಸಿ ಯಶಸ್ಸು ಸಾಧ್ಯವಾಗಿಲ್ಲ.

ಸಿಡಿದೆದ್ದ ಹಿಂದು ಹೋರಾಟಗಾರ: ದ.ಕ. ಜಿಲ್ಲೆಯಲ್ಲೇ ಸಂಘಪರಿವಾರದ ಪ್ರಬಲ ಬೇರುಗಳಿರುವ ಕ್ಷೇತ್ರ ಪುತ್ತೂರು. 1999ರಲ್ಲಿ ಡಿ.ವಿ. ಸದಾನಂದ ಗೌಡ, 2004ರಲ್ಲಿ ಶಕುಂತಳಾ ಶೆಟ್ಟಿ, 2008ರಲ್ಲಿ ಮಲ್ಲಿಕಾ ಪ್ರಸಾದ್, 2018ರಲ್ಲಿ ಸಂಜೀವ ಮಠಂದೂರು ಹಿಂದುತ್ವದ ಆಧಾರದಲ್ಲೇ ಜಯಗಳಿಸಿದ್ದರು. 2013ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಶಕುಂತಳಾ ಶೆಟ್ಟಿ ಜಯಗಳಿಸಿದ್ದನ್ನು ಹೊರತುಪಡಿಸಿ ಇತ್ತೀಚಿನ ಎರಡು ದಶಕಗಳಲ್ಲಿ ಕೈ ಪಾಳಯಕ್ಕೆ ಅವಕಾಶವೇ ಲಭಿಸಿಲ್ಲ. ಆದರೆ, ಈ ಬಾರಿ ಬಿಜೆಪಿಯಲ್ಲಿ ಭಿನ್ನಸ್ವರಗಳು ಕೇಳುತ್ತಿವೆ. 1997ರ ಸೌಮ್ಯಾ ಭಟ್ ಕೊಲೆ ಪ್ರಕರಣ, 2006ರ ಅಕ್ಷತಾ ಕೊಲೆ ಪ್ರಕರಣದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅರುಣ್ ಕುಮಾರ್ ಪುತ್ತಿಲ 1997ರಿಂದ ಇಂದಿನವರೆಗೆ ಪುತ್ತೂರು ತಾಲೂಕಿನಾದ್ಯಂತ ನಡೆದ ಹಿಂದು ಸಮಾವೇಶಗಳ ನೇತೃತ್ವ ವಹಿಸಿದ್ದರು. ಹಲವು ವರ್ಷಗಳಿಂದ ಹಿಂದುತ್ವದ ಮೂಲಕ ಬಿಜೆಪಿ ಗೆಲುವಿಗೆ ಶ್ರಮಿಸುತ್ತಿರುವ ಪುತ್ತಿಲ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎನ್ನುವ ಬೇಸರವೂ ಅವರ ಹಿಂಬಾಲಕರಿಗೆ. ಕಳೆದ ಬಾರಿ ಟಿಕೆಟ್ ಸಿಗದೆ ನಿರಾಸೆ ಅನುಭವಿಸಿದರೂ ಮಠಂದೂರು ಗೆಲುವಿಗೆ ಶ್ರಮಿಸಿದ್ದ ಪುತ್ತಿಲ, ಈ ಬಾರಿ ತಿರುಗಿ ಬಿದ್ದಿದ್ದಾರೆ. ಹಾಲಿ ಶಾಸಕ ಸಂಜೀವ ಮಠಂದೂರು ಬದಲಾಗಿ ಪುತ್ತಿಲ ಅವರಿಗೆ ನೀಡಬೇಕು ಎನ್ನುವ ಅಭಿಯಾನವನ್ನು ಹಿಂಬಾಲಕರು ಆರಂಭಿಸಿದ್ದಾರೆ. ಈ ನಡುವೆ, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಿಜೆಪಿ ದ.ಕ. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಉದ್ಯಮಿ ಅಶೋಕ್ ರೈ ಕೈ ಪಾಳಯದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವೆಲ್ಲವೂ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಎದುರಾಗಿರುವ ಹೊಸ ಸವಾಲುಗಳು.

ಕಿಡಿ ಹಚ್ಚಿದ ಅಣಬೆ!: ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಸಚಿವ ಸುನೀಲ್ ಕುಮಾರ್ ಅವರ ಹೇಳಿಕೆ ಒಂದಿಷ್ಟು ಹಿಂದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಮಾತಿದೆ. ಇತ್ತ ಪುತ್ತೂರು ಶಾಸಕ ಸಂಜೀವ ಮಠಂದೂರು ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರನ್ನು ಅಣಬೆಗೆ ಹೋಲಿಸಿರುವುದು ಇಬ್ಬರ ನಡುವಿನ ಕಂದಕ ಹೆಚ್ಚುವಂತೆ ಮಾಡಿದೆ.

ಹಿಂದುತ್ವ, ದತ್ತಮಾಲೆ ಮೂಲಕ ಪ್ರಖರ ಹಿಂದುವಾದಿ ಎಂದು ಗುರುತಿಸಿಕೊಂಡ ಸುನೀಲ್ ಕುಮಾರ್​ಗೆ 2004ರಲ್ಲಿ ಬಿಜೆಪಿ ಟಿಕೆಟ್ ನೀಡಿ, ಕಾಂಗ್ರೆಸ್ ಕೋಟೆ ಕಬಳಿಸುವಲ್ಲಿ ಯಶಸ್ವಿಯಾಯಿತು. ಕಾರ್ಕಳ ಬಜರಂಗದಳದ ಪ್ರಮುಖ ನಾಯಕ ವಿವೇಕಾನಂದ ಶೆಣೈ, ಪ್ರಮೋದ್ ಮುತಾಲಿಕ್ ಸಹಿತ ಹಲವು ಪ್ರಖರ ಹಿಂದುವಾದಿಗಳು ಕಾರ್ಕಳ ನಗರ, ಹೊಸ್ಮಾರು, ಇರ್ವತ್ತೂರು, ಬಜಗೋಳಿ, ನಿಟ್ಟೆ, ಈದು, ಮಿಯಾರು ಪ್ರದೇಶಗಳಲ್ಲಿ 9 ಬೃಹತ್ ಹಿಂದು ಸಮಾವೇಶ, ಮನೆಮನೆ ಭೇಟಿ ನಡೆಸಿ ಹಿಂದುತ್ವದ ಕಹಳೆ ಮೊಳಗಿಸಿದ್ದರಿಂದ ಈ ಜಯ ಸಾಧ್ಯವಾಗಿತ್ತು. ಆಗಿನ ಕಾಂಗ್ರೆಸ್ ಶಾಸಕ ಗೋಪಾಲ ಭಂಡಾರಿ ವಿರುದ್ಧ ಸುನೀಲ್ ಕುಮಾರ್ 9795 ಮತಗಳ ಅಂತರದಿಂದ ಗೆದ್ದಿದ್ದರು. ನಂತರದ 2008ರ ಚುನಾವಣೆ ಹೊರತಾಗಿ ಕಾರ್ಕಳ ಹಿಂದುತ್ವದ ಭದ್ರಕೋಟೆಯಾಗಿಯೇ ಉಳಿದುಕೊಂಡಿದೆ. ಆದರೆ, ಈ ಬಾರಿ ಕಾರ್ಕಳದಿಂದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪಕ್ಷೇತರವಾಗಿ ಸ್ಪರ್ಧಿಸಲು ತೀರ್ವನಿಸಿದ್ದು, ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಬೇಡಿಕೆ ಸಲ್ಲಿಸಿದೆ. ಆದರೆ, ಬಿಜೆಪಿ ಇದಕ್ಕೆ ಸೊಪ್ಪು ಹಾಕುವ ಸಾಧ್ಯತೆಗಳಿಲ್ಲ. ಮುತಾಲಿಕ್ ಸ್ಪರ್ಧೆಯಿಂದ ಬಿಜೆಪಿಗೆ ಒಂದಿಷ್ಟು ಇರುಸುಮುರುಸು ಉಂಟಾಗುವ ಸಾಧ್ಯತೆಗಳಿವೆ.