ಮುಂದಿನ ಸಿಎಂ ಸಿದ್ದರಾಮಯ್ಯ ಎಂದ ಶಾಸಕ ಬೈರತಿ ಸುರೇಶ್; ಕುರುಬ ಸಮುದಾಯದ ಸಮಾವೇಶದ ವೇದಿಕೆ ಮೇಲೆಯೇ ಕೆಲವರ ಆಕ್ಷೇಪ; ನೂಕಾಟ-ತಳ್ಳಾಟ
ಕೊಪ್ಪಳ: ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಶಾಸಕ ಬೈರತಿ ಸುರೇಶ್ ಹೇಳಿಕೆಗೆ ಸಿದ್ದರಾಮಯ್ಯ ಎದುರಲ್ಲೇ ಕೆಲವರು ಗರಂ ಆಗಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕೊಪ್ಪಳದ ಯಲಬುರ್ಗದಲ್ಲಿ ನಡೆದಿದೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ ನಡೆದ ಕುರುಬ ಸಮುದಾಯದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.
ಈ ವೇಳೆ ಭಾಷಣ ಮುಂದುವರೆಸಿದ ಶಾಸಕ ಬೈರತಿ ಸುರೇಶ್, ಇಲ್ಲಿ 4-5 ಜನ ನೀವು ಗಲಾಟೆ ಮಾಡಿದ ಮಾತ್ರಕ್ಕೆ ನಾನೇನು ಕೇಳುವವನಲ್ಲ, ನಾನು ಸಿದ್ದರಾಮಯ್ಯನವರನ್ನು ಹೊಗಳುತ್ತೇನೆ. ನಿಮಗೆ ಇಷ್ಟವಿಲ್ಲದಿದ್ದರೆ ಸಮಾವೇಶದಿಂದ ಮೊದಲು ಹೊರಹೋಗಿ ಎಂದು ಗುಡುಗಿದ್ದಾರೆ.
ಇದಕ್ಕೆ ಸಿಡಿದೆದ್ದ ಕೆಲ ಮುಖಂಡರು ಜಾತ್ರೆ, ರಾಯಣ್ಣ ಮೂರ್ತಿ ಅನಾವರಣಕ್ಕಾಗಿ ಪಕ್ಷಾತೀತವಾಗಿ ಎಲ್ಲರೂ ದುಡಿದಿದ್ದಾರೆ. ಕೇವಲ ಸಿದ್ದರಾಮಯ್ಯ ಒಬ್ಬರನ್ನೇ ನೀವು ಹೊಗಳಬೇಡಿ ಎಂದಿದ್ದಾರೆ. ಆದರೂ ಸುಮ್ಮನಾಗದ ಶಾಸಕರು ಸಿದ್ದರಾಮಯ್ಯನವರನ್ನು ಹೊಗಳುತ್ತೇನೆ ಏನು ಬೇಕಾದ್ರೂ ಮಾಡಿಕೊಳ್ಳಿ ಎಂದಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ಆರಂಭವಾದ ಪ್ರಸಂಗ ನಡೆದಿದೆ.