ಔರಾದನ ಮಹಿಳೆಗೆ ಸ್ವಚ್ಛ ಸುಜಲ್ ಶಕ್ತಿ ಪ್ರಶಸ್ತಿ

ಔರಾದ: ತಾಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಪವಾರ್ಗೆ ಕೇಂದ್ರ ಸರ್ಕಾರದ 2023ನೇ ಸಾಲಿನ ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ ಪ್ರಶಸ್ತಿ ದೊರೆತಿದೆ.
ದೆಹಲಿಯ ವಿಜ್ಞಾನ ಭವನದ ಪಂಡಿತ್ ದೀನದಯಾಳ್ ಅಂತ್ಯೋದಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರು ಗೀತಾ ಪವಾರ್ಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
2022ರ ಜನವರಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ರಿಲಾಯನ್ಸ್ ಫೌಂಡೇಷನ್, ಸ್ವಚ್ಛ ಭಾರತ ಮಿಷನ್ ಸಹಯೋಗದಲ್ಲಿ ಧೂಪತಮಹಾಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಓಡಿಎಫ್ + ಘಟಕಗಳನ್ನು ಅನುಷ್ಠಾನ ಕುರಿತ ಮಾಹಿತಿ ಪಡೆದ ಗೀತಾ ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಭಾಗದ ಏಕೈಕ ಸದಸ್ಯೆ: ಬೂದು ನೀರಿನ ಸಮರ್ಪಕ ನಿರ್ವಹಣೆ, ಕೆಸರು ನಿರ್ವಹಣೆ ವಿಭಾಗದಲ್ಲೇ ಏಕೈಕ ಗ್ರಾಪಂ ಸಾಧಕಿಯಾಗಿ ಗೀತಾ ಪವಾರ್ ಹೊರಹೊಮ್ಮಿದ್ದಾರೆ. ಸ್ವಚ್ಛ ಭಾರತ ಮಿಷನ್, ಜಲಜೀವನ್ ಮಿಷನ್, ರಾಷ್ಟ್ರೀಯ ಜಲಮಿಷನ್ ಸೇರಿ ವಿವಿಧ ಜಲ ಸಂರಕ್ಷಣಾ ಪ್ರಯತ್ನಗಳಡಿ ಸ್ವಚ್ಛ ಮತ್ತು ಶುದ್ಧ ನೀರಿನ ಗ್ರಾಮ ಮಾಡುವಲ್ಲಿ ಮಹಿಳಾ ನಾಯಕತ್ವಕ್ಕೆ ನೇಮಕ ಮಾಡಲಾಗಿದೆ. ದೆಹಲಿ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ರಾಷ್ಟಪತಿ ದೌಪದಿ ಮುರ್ಮು ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಿದ್ದಾರೆ.