ಇನ್ನು ಈ ರಾಜ್ಯದ ಸಚಿವನಾಗಿ ಯಾವುದೇ ಪ್ರಯೋಜನವಿಲ್ಲವೆಂದ ಬಸನಗೌಡ ಪಾಟೀಲ್ ಯತ್ನಾಳ್

ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಆರು ತಿಂಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಇನ್ಮೇಲೆ ಸಚಿವ ಸ್ಥಾನ ನೀಡಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಯಚೂರಿನ ದೇವನದುರ್ಗದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಮಂತ್ರಿ ಸ್ಥಾನ ಬೇಕು ಎನ್ನುವವರು ಹೈಕಮಾಂಡ್ ಬಳಿ ಹೋಗಿ ಚರ್ಚೆ ಮಾಡ್ತಾರೆ.
ಮಂತ್ರಿ ಸ್ಥಾನ ಬೇಕು ಎನ್ನುವವರು ಪಾಪ ದಿನಾ ಹೋಗಿ ವರಿಷ್ಠರಿಗಾಗಿ ಕಾದು ಬರ್ತಾರೆ. ನಾನು ಮಂತ್ರಿ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿಲ್ಲ. ಹೀಗಾಗಿ ನಾನು ಆರಾಮಿದ್ದೇನೆ. ಮಂತ್ರಿ ಸ್ಥಾನ ಬೇಕಂದ್ರೆ ದೆಹಲಿಗೆ ಹೋಗಬೇಕು, ಅವರನ್ನು ಇವರನ್ನ ಭೇಟಿಯಾಗಬೇಕು. ನಮ್ಮ ಕ್ಷೇತ್ರವನ್ನು ಬಿಟ್ಟು ಸಿಎಂ, ರಾಜ್ಯಾಧ್ಯಕ್ಷರ ಮನೆ ಅಲೆದಾಡುವುದೇ ಕೆಲಸವಾಗಿ ಬಿಡುತ್ತದೆ. ಮಂತ್ರಿಗಿಂತಲೂ ಹೆಚ್ಚಿನ ಅಧಿಕಾರ ನಮ್ಮಲ್ಲೇ ಇದೆ ಎಂದು ಹೇಳಿದರು.
ಸಿಎಂ ಎಲ್ಲಾ ರೀತಿಯ ಕೆಲಸವನ್ನು ಮಾಡ್ತಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನ ಏಕೆ ಬೇಕು..? ಮುಂದಿನ ಚುನಾವಣೆಯನ್ನ ನರೇಂದ್ರ ಮೋದಿಯವರ ಹೆಸರಲ್ಲಿ ಎದುರಿಸುತ್ತೇವೆ, ಅವರ ಹೆಸರಲ್ಲೇ ಮುಂದೆ ಬರ್ತಿವಿ. ರಾಜ್ಯದ ನಾಯಕರ ಬಗ್ಗೆ ನಾನೇನು ಹೇಳಲಾರೆ ಎಂದು ಹೇಳಿದರು.