ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೆ?

ಬೆಂಗಳೂರು, ಡಿಸೆಂಬರ್ 17; ಕರ್ನಾಟಕದಲ್ಲಿಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಿದೆ. ಈ ಸಮಿತಿ ರಾಜ್ಯದಲ್ಲಿ ಪ್ರತಿದಿನ ದಾಖಲಾಗುತ್ತಿರುವ ಹೊಸ ಕೋವಿಡ್ ಪ್ರಕರಣ, ರಾಜ್ಯದ ಪಾಸಿಟಿವಿಟಿ ದರವನ್ನು ಗಮನಿಸಿ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಿದೆ. ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 303 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಪಾಸಿಟಿವಿಟಿ ದರ ಶೇ 0.23 ಆಗಿದೆ. ಕೆಲವು ದಿನಗಳಿಂದ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 300ರ ಅಸುಪಾಸಿನಲ್ಲಿದೆ. ಈ ಹಿನ್ನಲೆಯಲ್ಲಿ ಹೊಸ ವರ್ಷಾಚರಣೆಗೆ ಸಹ ಸರ್ಕಾರ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ. ತಾಂತ್ರಿಕ ಸಲಹಾ ಸಮಿತಿ ದೊಡ್ಡ ಗುಂಪುಗಳಾಗಿ ಮತ್ತು ಒಳಾಂಗಣ ಪ್ರದೇಶಗಳಲ್ಲಿ ಜನರು ಹೆಚ್ಚಾಗಿ ಸೇರುವುದನ್ನು ನಿಯಂತ್ರಿಸಲು ಶಿಫಾಸರು ಮಾಡಿದೆ. ಮಾಲ್‌ಗಳು, ಪಬ್, ರೆಸ್ಟೋರೆಂಟ್, ಮುಖ್ಯ ರಸ್ತೆಗಳಲ್ಲಿ ಜನರು ಹೆಚ್ಚಾಗಿ ಸೇರುವುದನ್ನು ನಿಯಂತ್ರಿಸಬೇಕು ಎಂದು ಸಲಹೆ ಮಾಡಿದೆ.
ಜನರು ಸೇರುವುದನ್ನು ನಿಯಂತ್ರಿಸಲು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದಡಿ ನಗರಗಳಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಬೇಕು ಎಂದು ತಾಂತ್ರಿಕ ಸಮಿತಿ ಸಲಹೆ ಕೊಟ್ಟಿದೆ.
ನೈಟ್ ಕರ್ಫ್ಯೂ ಜಾರಿ? ತಾಂತ್ರಿಕ ಸಲಹಾ ಸಮಿತಿ ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ 30 ಡಿಸೆಂಬರ್ ರಿಂದ ಜನವರಿ 2ರ ತನಕ (ಸಂಜೆ 7 ರಿಂದ ಬೆಳಗ್ಗೆ 5 ಗಂಟೆ) ತನಕ ನೈಟ್ ಕರ್ಫ್ಯೂ ಜಾರಿಗೊಳಿಸಬಹುದು ಎಂದು ಸಲಹೆ ನೀಡಿದೆ.
ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಕ್ಕೆ ಡಿಸೆಂಬರ್ 22 ರಿಂದ ಜನವರಿ 2ರ ತನಕ ಶೇ 50ರಷ್ಟು ಜನರು ಮಾತ್ರ ಭೇಟಿ ನೀಡಲು ಅವಕಾಶ ನೀಡುವಂತೆ ಮತ್ತು ಧಾರ್ಮಿಕ ಕೇಂದ್ರದ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯನ್ನು ಆದಷ್ಟು ನಿಯಂತ್ರಿಸಬೇಕು. ಪಬ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಒಳಾಂಗಣದಲ್ಲಿಯೂ ಆಚರಣೆ ಮಾಡುವುದನ್ನು ಆದಷ್ಟು ನಿಯಂತ್ರಿಸಬೇಕು ಎಂದು ಸಲಹೆ ನೀಡಲಾಗಿದೆ.
ನಿಷೇಧ ಹೇರದಂತೆ ಮನವಿ ಬೆಂಗಳೂರು ನಗರದಲ್ಲಿ ಹೊಸವರ್ಷಾಚರಣೆಗೆ ನಿಷೇಧ ಹೇರದಂತೆ ಪಬ್, ಬಾರ್ ಮತ್ತು ಹೋಟೆಲ್ ಮಾಲೀಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದಾರೆ. ಕಳೆದ ವರ್ಷ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಹೊಸವರ್ಷಾಚರಣೆ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿತ್ತು.
ಈ ವರ್ಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಯಾವುದೇ ನಿಷೇಧ ಹೇರಬಾರದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಡಿಸುವ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡುತ್ತೇವೆ. ಶೇ 80ರಷ್ಟು ಜನರು ಲಸಿಕೆ ಪಡೆದಿದ್ದಾರೆ. ಕೋವಿಡ್ ಪರಿಸ್ಥಿತಿ ಸಹ ನಿಯಂತ್ರಣದಲ್ಲಿದೆ. ಆದ್ದರಿಂದ ಕಾರ್ಯಕ್ರಮ ಆಯೋಜನೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 197 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 5630 ಆಗಿದೆ. ಕರ್ನಾಟಕದಲ್ಲಿ ಗುರುವಾರ 5 ಹೊಸ ಓಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.