ಡಿಕೆಶಿ ಆಪ್ತ ಯು.ಬಿ.ಶೆಟ್ಟಿ ಮನೆಗೆ ಐಟಿ ರೆಡ್...ಶೆಟ್ಟಿ ಭೇಟಿಗೆ ಬರ್ತಿರುವ ಕಾಂಗ್ರೆಸ್ ಮುಖಂಡರು
ಕನಕಪುರ ಬಂಡೆ ಡಿ.ಕೆ.ಶಿವಕುಮಾರ ಅವರ ಆಪ್ತರಾದ ಯು.ಬಿ.ಶೆಟ್ಟಿ ಅವರ ಮನೆ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಶೆಟ್ಟಿ ಅವರ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡುತ್ತಿದ್ದಾರೆ. ಯು.ಬಿ.ಶೆಟ್ಟಿ ಅವರು ಮೊದಲಿಗೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಆ ನಂತರ ಅವರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು ಬೆಂಗಳೂರು, ಬೈಂದೂರು, ಕಲಬುರ್ಗಿ ಸೇರಿದಂತೆ ಅನೇಕ ಕಡೆಗಳಲ್ಲಿ ಶಾಲಾ, ಕಾಲೇಜುಗಳನ್ನು ಸ್ಥಾಪಿಸಿದ್ದರು. ಜೊತೆಗೆ ಒಂದು ಸರ್ಕಾರಿ ಶಾಲೆಯನ್ನೂ ದತ್ತು ಪಡೆದಿದ್ದರು. ಸದ್ಯ ಶೆಟ್ಟಿ ಅವರ ಮನೆ ಮೇಲೆ ನಡೆದಿರುವ ಈ ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಆರೋಪಿಸಿದ್ದಾರೆ.ಗೋವಾದಿಂದ ಬಂದ ಐಟಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶೆಟ್ಟಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸ್ಥಳೀಯ ಸಾಕ್ಷಿಗಳು ಬೇಕು ಎಂದು ಅಧಿಕಾರಿಗಳು ಕೇಳಿದಾಗ ಕಾಂಗ್ರೆಸ್ ಮುಖಂಡರಾದ ಆನಂದ ಜಾಧವ್ ಹಾಗೂ ರಾಬರ್ಟ್ ದದ್ದಾಪುರಿ ಅವರು ಶೆಟ್ಟಿ ಅವರ ಮನೆಯ ಒಳಗೆ ಹೋಗಿದ್ದರು. ಈ ವೇಳೆ ಅಧಿಕಾರಿಗಳು ಶೆಟ್ಟಿ ಅವರನ್ನು ವಿಚಾರಣೆ ನಡೆಸಿ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಿಗ್ಗೆ 8.30ರ ಸುಮಾರಿಗೆ ಐಟಿ ಅಧಿಕಾರಿಗಳು ಶೆಟ್ಟಿ ಅವರ ಮನೆಯ ಒಳಗೆ ಹೋಗಿದ್ದು, ಕಳೆದ ಮೂರೂವರೆ ಗಂಟೆಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಶೆಟ್ಟಿ ಅವರು ಡಿ.ಕೆ.ಶಿವಕುಮಾರ ಅವರ ಆಪ್ತರು ಹೌದು ಮಂಗಳೂರಿನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಶೆಟ್ಟಿ ಅವರು ಟಿಕೆಟ್ ಕೇಳಿದ್ದರು. ಆ ಕಾರಣಕ್ಕೆ ರಾಜಕೀಯ ಪ್ರೇರಿತವಾಗಿ ದಾಳಿ ನಡೆದಿರಬಹುದು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ...