'ಮೇಲ್ವರ್ಗವರಿಗೆ ಶೇ 10 ಮೀಸಲಾತಿ ಅಸಂವಿಧಾನಿಕ'

'ಮೇಲ್ವರ್ಗವರಿಗೆ ಶೇ 10 ಮೀಸಲಾತಿ ಅಸಂವಿಧಾನಿಕ'

ಲಬುರಗಿ: 'ಮೇಲ್ವರ್ಗದ ಸಮುದಾಯಗಳಿಗೆ ಶೇ 10ರಷ್ಟು ಮೀಸಲಾತಿ ನೀಡುವುದು ಅಸಂವಿಧಾನಿಕ' ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಬಾಮ್‌ಸೆಫ್‌ ಮತ್ತು ಯುನಿಟಿ ಆಫ್‌ ಮೂಲನಿವಾಸಿ ಸಂಘಟನೆಯ 15ನೇ ರಾಜ್ಯ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

'ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರವೇ ಮೀಸಲಾತಿ ಕೊಡಬೇಕು ಎಂಬುವುದು ಸಂವಿಧಾನದ ಆಶಯ. ಆದರೆ, ಇಂದಿನ ಸರ್ಕಾರಗಳು ಇದನ್ನು ಮೀರಿ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡುತ್ತಿರುವುದು ಅಸಂವಿಧಾನಿಕ ನಡೆ. ತುಳಿತಕ್ಕೆ ಮತ್ತು ಶೋಷಣೆಗೆ ಒಳಗಾದವರನ್ನು ಮೀಸಲಾತಿ ಸೌಕರ್ಯದಿಂದ ವಂಚನೆ ಮಾಡುವಂತಹ ದೊಡ್ಡ ಸಂಚು ಇದರ ಹಿಂದಿದೆ' ಎಂದು ಟೀಕಿಸಿದರು.

'ಆಳುವ ಸರ್ಕಾರ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ್ದು ಏಕೆ ಎಂಬುವುದು ತಿಳಿಯುತ್ತಿಲ್ಲ. ಸ್ವಾತಂತ್ರ್ಯ ಕೇವಲ ರಾಷ್ಟ್ರಕ್ಕೆ ಸಿಕ್ಕರೆ ಸಾಲದು, ದೇಶದಲ್ಲಿನ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದ ಆಶಯಗಳು ತಲು‍ಪುವಂತೆ ಮಾಡಬೇಕು ಎಂಬುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋದದ್ದು ಸ್ವಾತಂತ್ರ್ಯವಲ್ಲ. ದೇಶದ ಎಲ್ಲ ನಿವಾಸಿಗಳಿಗೆ ಸಂವಿಧಾನ ಆಶಯದಂತೆ ಸೌಕರ್ಯಗಳು ಲಭಿಸಬೇಕು' ಎಂದು ಹೇಳಿದರು.

ಬೆಳಮಗಿ ಧ್ಯಾನ ಭೂಮಿ ಬುದ್ಧ ವಿಹಾರದ ಭಂತೆ ಅಮರ ಜ್ಯೋತಿ ಮಾತನಾಡಿ, 'ಬೌದ್ಧ ಧರ್ಮ ಜಾತಿ, ಮತ, ಪಂಥಗಳ ಭೇದ ಇಲ್ಲದೆ ಎಲ್ಲರನ್ನೂ ಸಮನಾಗಿ ಕಾಣುತ್ತದೆ. ಹೀಗಾಗಿ, ಎಲ್ಲರೂ ಬೌದ್ಧ ಧರ್ಮದತ್ತ ಬಂದರೇ ದೇಶದಲ್ಲಿ ಶಾಂತಿ ನೆಲೆಸುತ್ತದೆ' ಎಂದರು.

ಪದವಿ ಪೂರ್ವ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿದರು.

ಜೇವರ್ಗಿಯ ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎನ್‌ಎಸ್‌ಎಸ್‌ ಕಲಬುರಗಿ ವಿಭಾಗೀಯ ಅಧಿಕಾರಿ ಚಂದ್ರಶೇಖರ ದೊಡ್ಡಮನಿ, ಡಾ.ಸುನಿಲ್ ಕುಮಾರ ಒಂಟಿ, ಸಿಇಸಿ ಸದಸ್ಯ ಸುಭಾಷ ಶೀಲವಂತ, ಸಂಘಟನೆಯ ರಾಷ್ಟ್ರೀಯ ಪ್ರಚಾರಕ ಎನ್‌.ಬಿ. ಕುರ್ಣೆ, ಯಲ್ಲಪ್ಪ ತಳವಾರ ಇದ್ದರು.