ಸಂಜಯ್ ರಾವುತ್‌ಗೆ ಜಾಮೀನು: ಬಿಜೆಪಿಯ ಸೇಡಿನ ರಾಜಕಾರಣವನ್ನು ಬಯಲು ಮಾಡಿದೆ- ಖರ್ಗೆ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಬಂಧನವನ್ನು ಅಕ್ರಮ ಎಂದು ಕರೆದ ಮುಂಬೈನ ವಿಶೇಷ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದು ಬಿಜೆಪಿಯ ಸೇಡಿನ ರಾಜಕಾರಣವನ್ನು ಬಯಲು ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಪತ್ರಾ ಚಾಲ್ ಭೂ ಹಗರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿದ್ದ ಮುಂಬೈ ನ್ಯಾಯಾಲಯ ಅವರ ಬಂಧನ ಕಾನೂನುಬಾಹಿರ ಎಂದು ಹೇಳಿತ್ತು.
ನಿನ್ನೆ ಸಂಜೆಯೇ ಸಂಜಯ್ ರಾವುತ್ ಮುಂಬೈನ ಆರ್ಥರ್ ಜೈಲಿನಿಂದ ಬಿಡುಗಡೆ ಆಗಿದ್ದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆ,'ಅಕ್ರಮ ಬಂಧನಕ್ಕಾಗಿ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿದೆ ಮತ್ತು ಅದರ ಅಧಿಕಾರದ ತೀವ್ರ ದುರ್ಬಬಳಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಿದೆ. ಸಂಜಯ್ ರಾವುತ್ ಅವರ ಜಾಮೀನು ಆದೇಶವು ಬಿಜೆಪಿ ಸರ್ಕಾರದ ಸೇಡಿನ ರಾಜಕೀಯವನ್ನು ಬಹಿರಂಗಪಡಿಸುತ್ತದೆ' ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿಯು ವಿಪಕ್ಷ ನಾಯಕರನ್ನು ಹಣಿಯುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತದೆ ಎಂದು ಅವರು ಕಿಡಿ ಕಾರಿದ್ದಾರೆ.