ಅ.30ಕ್ಕೆ ಕಲಬುರ್ಗಿಯಲ್ಲಿ ಬೃಹತ್ ಒಬಿಸಿ ಸಮಾವೇಶ, 5 ಲಕ್ಷ ಜನ ಸೇರುವ ನಿರೀಕ್ಷೆ : ಸಚಿವ ಸುನಿಲ್ ಕುಮಾರ್ ಘೋಷಣೆ

ಬೆಂಗಳೂರು: ಅ 30ರಂದು ಕಲಬುರಗಿಯಲ್ಲಿ ಬಿಜೆಪಿಯ ಒಬಿಸಿ ಸಮಾವೇಶ ಆಯೋಜಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಸುನಿಲ್ ಕುಮಾರ್ , ಅ 30ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಆಯೋಜಿಸಲಾಗುವುದು. ಸಮಾವೇಶದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ ಸೇರಿ ಪ್ರಮುಖರು ಭಾಗವಹಿಸಲಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕಲಬುರ್ಗಿ ಕೇಂದ್ರಿತವಾಗಿ ಐತಿಹಾಸಿಕ ಸಮಾವೇಶ ನಡೆಯಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ ವರ್ಗಗಳಿಗೆ ಪ್ರಾಧಾನ್ಯತೆ ಕೊಡಲಾಗಿದೆ. ಬಿಜೆಪಿಯು ಹಿಂದುಳಿದ ವರ್ಗದಲ್ಲಿ ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ತಾವು ಹಿಂದುಳಿದ ವರ್ಗಗಳ ಧ್ವನಿ ಎನ್ನುವುದನ್ನು ಭಾಷಣದಲ್ಲಿ ಹೇಳಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ತರಲಿಲ್ಲ. ಒಬಿಸಿ ಸಮುದಾಯಗಳು ದೊಡ್ಡ ರಾಜಕೀಯ ಶಕ್ತಿಯಾಗಿ ಮುಂದಿನ ದಿನಗಳಲ್ಲಿ ಸಕ್ರೀಯರಾಗುತ್ತವೆ. ಮೊದಲ ಬಾರಿಗೆ 5 ಲಕ್ಷ ಓಬಿಸಿ ಸಮುದಾಯದ ಜನ ಒಂದು ಕಡೆ ಸೇರುತ್ತಿದ್ದಾರೆ. ಸಮಾವೇಶದ ಪೂರ್ವ ತಯಾರಿಗಾಗಿ ಕೆ.ಎಸ್. ಈಶ್ವರಪ್ಪನವರೇ ಹಲವು ಪ್ರವಾಸ ಮಾಡಿದ್ದಾರೆ. ಸಮಾವೇಶವು ಅವರ ನೇತೃತ್ವದಲ್ಲೇ ನಡೆಯುತ್ತದೆ ಎಂದರು.