ಪೌರಕಾರ್ಮಿಕ'ರಿಗೆ ಭರ್ಜರಿ ಸಿಹಿಸುದ್ದಿ: '11,307 ನೌಕರ'ರನ್ನು ಖಾಯಂಗೊಳಿಸಿ 'ರಾಜ್ಯ ಸರ್ಕಾರ' ಆದೇಶ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಲಿ ನೇರಪಾವತಿ, ಕ್ಷಏಮಾಭಿವೃದ್ಧಿ, ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ 11,307 ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಪೌರ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರ್ಥಿಕ ಇಲಾಖೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ 11,307 ಸಂಖ್ಯಾತಿರಕ್ತ ಪೌರ ಕಾರ್ಮಿಕರ ಹುದ್ದೆಗಳನ್ನು ಸೃಜಿಸಿ, ಈ ಹುದ್ದೆಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ರೋಸ್ಟರ್, ಮೀಸಲಾತಿ ನಿಯಮಗಳನ್ವಯ ನೇಮಕಾತಿ ಮಾಡಿಕೊಳ್ಳಲು ಆದೇಶಿಸಿದ್ದಾರೆ.
ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಲಿ ನೇರಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ ಆಧಾರದಲ್ಲಿ ಎರಡು ವರ್ಷಗಳ ಕಡಿಮೆ ಇಲ್ಲದಂತೆ ನಿರಂತರವಾಗಿ, ಕೆಲಸ ನಿರ್ವಹಿಸಿರುವ ಪೌರ ಕಾರ್ಮಿಕರಿಗೆ ಆದ್ಯತೆಯನ್ನು ನೀಡುವಂತೆ ಷರತ್ತು ವಿಧಿಸಿದ್ದಾರೆ.
ಎರಡು ವರ್ಷಗಳ ಮೇಲ್ಪಟ್ಟು ಬಿಬಿಎಂಪಿಯಿಂದ ವೇತನ ಪಡೆದು ದಾಖಲಾತಿಗಳನ್ನು ನೇಮಕಾತಿಯಲ್ಲಿ ಆದ್ಯತೆಗೆ ಪರಿಗಣಿಸತಕ್ಕದ್ದು, ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಸೇವಾವಧಿ ಒಂದೇ ಇದ್ದ ಪಕ್ಷದಲ್ಲಿ, ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಪರಿಗಣಿಸಬೇಕು.
ಪೌರ ಕಾರ್ಮಕರ ವೇತನವನ್ನು ಎಸ್ ಎಫ್ ಸಿ ಅನುದಾನದಡಿ ರಾಜ್ಯ ಆರ್ಥಿಕ ಆಯೋಗದ ಶಿಫಾರಸ್ಸಿನಂತೆ ಇರುವ ಅಧಿಕಾರ ಹಂಚಿಕೆಗೆ ಮಿತಿಗೊಳಿಸುವುದು ಹಾಗೂ ಇದಕ್ಕೆ ತಗಲುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಬಿಬಿಎಂಪಿಯ ಸ್ವಂತ ನಿಧಿಯಿಂದ ಭರಿಸತಕ್ಕದ್ದು ಎಂಬುದಾಗಿ ಷರತ್ತಿನಲ್ಲಿ ವಿಧಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ