ಅನುಕಂಪದ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಪತಿಯನ್ನು ಪರಲೋಕಕ್ಕೆ ಕಳಿಸಿದ ಪತ್ನಿ

ಅನುಕಂಪದ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಪತಿಯನ್ನು ಪರಲೋಕಕ್ಕೆ ಕಳಿಸಿದ ಪತ್ನಿ

ತೆಲಂಗಾಣ: ಗಂಡ ಸರ್ಕಾರಿ ನೌಕರಿಯಲ್ಲಿದ್ದು, ಅಕಾಲಿಕ ಮರಣ ಹೊಂದಿದರೆ ಹೆಂಡತಿಗೆ ಅಥವಾ ಮಕ್ಕಳಿಗೆ ಸಹಜವಾಗಿಯೇ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಇದೀಗ ಇದನ್ನೇ ಬಂಡವಾಳವನ್ನಾಗಿಸಿಕೊಂಡು ಮಹಿಳೆಯೊಬ್ಬಳು ತನ್ನ ಗಂಡನನ್ನೇ ಹತ್ಯೆ ಮಾಡಿ ಸುದ್ದಿಯಾಗಿದ್ದಾಳೆ.

ಮೃತ ಕೊಮ್ಮಾರಬೋನ ಶ್ರೀನಿವಾಸ್(50) ಚುಂಚಪಲ್ಲಿ ಜಿಲ್ಲೆಯ ಗಾಂಧಿ ಕಾಲೋನಿ ನಿವಾಸಿ. ಈತ ಕೋತಗುಡೆಂ ಕಲೆಕ್ಟರೇಟ್​​ನಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಗಂಡ ದಿನವೂ ಕುಡಿದು ಬಂದು ಹೆಂಡಿತಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಇದಿರಿಂದ ಪತ್ನಿ ಸೀತಾಮಹಾಲಕ್ಷ್ಮಿ ಬೇಸತ್ತಿದ್ದಳು. ಹೀಗಾಗಿ ಗಂಡನನ್ನು ಕೊಲೆ ಮಾಡಿ, ಅನುಕಂಪದ ಆಧಾರದಲ್ಲಿ ಆತನ ಉದ್ಯೋಗ ಗಿಟ್ಟಿಸಿಕೊಂಡು ನೆಮ್ಮದಿಯಾಗಿ ಜೀವನ ದೂಡಬಹುದು ಎಂದು ಯೋಚಿಸಿಕೊಂಡಿದ್ದಾಳೆ.

ಅದರಂತೆ ಕಳೆದ ತಿಂಗಳಯ ಗಂಡ ಎಂದಿನಂತೆ ಕುಡಿದು ಬಂದು ಮಲಗಿದ್ದಾನೆ. ಈ ವೇಳೆ ಪತ್ನಿ ಸೀತಾಮಹಾಲಕ್ಷ್ಮಿ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾಳೆ. ನಂತರ ಅಡುಗೆ ಮನೆಗೆ ದೇಹವನ್ನು ಎಳೆದು ತಂದು ಜಾರಿ ಬಿದ್ದ ಸ್ಥಿತಿಯಲ್ಲಿ ಮಲಗಿಸಿದ್ದಾಳೆ. ನಂತರ ಮಗನ ಸಹಾಯದಿಂದ ಗಂಡನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ.

ಅಟೆಂಡರ್ ಶ್ರೀನಿವಾಸ್, ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾನೆ. ತಂದೆಯ ಸಾವು ಮಗನಲ್ಲಿ ಹಲವು ಅನುಮಾನ ಹುಟ್ಟುಹಾಕಿತ್ತು. ಇದರಿಂದ ಆತ ನೇರವಾಗಿ ಪೊಲೀಸ್ ದೂರು ನೀಡಿದ್ದ. ಕೂಡಲೇ ಪೊಲೀಸರು ತನಿಖಗೆ ಮುಂದಾಗಿದ್ದಾರೆ. ತನಿಖೆಗೆ ಪೂರಕವಾಗಿ ವೈದ್ಯರು ಪೊಲೀಸರಿಗೆ ಒಂದಷ್ಟು ಮಾಹಿತಿ ನೀಡಿದ್ದರು. ಈ ವೇಳೆ ಪತಿಯ ಸಾವಿನ ನಂತರ ಪತ್ನಿ ನಾಪತ್ತೆಯಾಗಲು ಯತ್ನಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಹೈದರಾಬಾದ್​ಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೊತೆಗುಡಂ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು.

ಪತ್ನಿ ಸೀತಾಮಹಾಲಕ್ಷ್ಮಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಗಂಡ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಆತನನ್ನು ಕೊಲೆ ಮಾಡಿ, ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಮುಂದಾದೆ ಎಂದು ಹೇಳಿರುವುದುನ್ನು ಚುಂಚಪಲ್ಲಿ ಪೊಲೀಸ್ ಠಾಣಾ ಸಬ್​​ ಇನ್ಸ್​ಪೆಕ್ಟರ್ ಕೆ.ಸುಮನ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)