ರಾಜ್ಯದಲ್ಲಿ ಮತ್ತೆ ಮಳೆ

ರಾಜ್ಯದಲ್ಲಿ ಮತ್ತೆ ಮಳೆ

ಬೆಂಗಳೂರು,ಅ.3- ಬಂಗಾಳಕೊಲ್ಲಿ ಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿ ಗಾಳಿಯಿಂದಾಗಿ ರಾಜ್ಯದ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಮಳೆ ಮುಂದುವರೆದಿದೆ. ನಿನ್ನೆಯಿಂದ ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಇಂದು ಮತ್ತು ನಾಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮುಂಗಾರು ಮರಳುವಿಕೆ ಹಾಗೂ ಹಿಂಗಾರು ಆರಂಭವಾಗುವ ಪರ್ವ ಕಾಲ ಇದಾಗಿದ್ದು, ಚದುರಿದಂತೆ ರಾಜ್ಯದ ಒಳನಾಡಿನಲ್ಲಿ ಮಳೆಯಾಗಲಿದೆ. ಆದರೆ ವ್ಯಾಪಕ ಪ್ರಮಾಣದಲ್ಲಿ ಭಾರೀ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ.

ಮೋಡ ಕವಿದ ವಾತಾವರಣ ಇರುವುದರಿಂದ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದು, ಚಳಿಯ ವಾತಾವರಣ ಕಂಡುಬರುತ್ತಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು ರಾತ್ರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮುಂದಿನ ವಾರ ಮುಂಗಾರು ಮರಳುವಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಸಂದರ್ಭದಲ್ಲೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.