ಕಾಂತಾರ ರಿಷಬ್ ಕೆರಿಯರ್‌ನಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾ; ಕಲೆಕ್ಷನ್ ಕುರಿತು ಬಾಯ್ಬಿಟ್ಟ ಕಾರ್ತಿಕ್ ಗೌಡ

ಕಾಂತಾರ ರಿಷಬ್ ಕೆರಿಯರ್‌ನಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾ; ಕಲೆಕ್ಷನ್ ಕುರಿತು ಬಾಯ್ಬಿಟ್ಟ ಕಾರ್ತಿಕ್ ಗೌಡ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಶುಕ್ರವಾರ ( ಸೆಪ್ಟೆಂಬರ್ 30 ) ಬಿಡುಗಡೆಗೊಂಡಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣ್ತಿದೆ. ಕರಾವಳಿ ಭಾಗದ ಜನರು ಅಪಾರವಾಗಿ ನಂಬುವ ಆಚರಣೆಗಳಾದ ಭೂತಕೋಲ ಹಾಗೂ ದೈವ ನರ್ತನದ ಅಂಶಗಳನ್ನು ಹೊಂದಿರುವ ಕಾಂತಾರ ಚಿತ್ರವನ್ನು ಸದ್ಯ ಇಡೀ ವಿಶ್ವದ ಸಿನಿಪ್ರೇಕ್ಷಕರು ಅಪ್ಪಿ ಒಪ್ಪಿಕೊಂಡಿದ್ದಾರೆ.

ಚಿತ್ರದ ಪ್ರೀಮಿಯರ್ ಶೋ ಮುಕ್ತಾಯವಾದಾಗಿನಿಂದಲೇ ಚಿತ್ರದ ಬಗ್ಗೆ ದೊಡ್ಡ ದೊಡ್ಡ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಈ ಚಿತ್ರದ ಆರ್ಭಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಮೊದಲ ದಿನಕ್ಕಿಂತ ಎರಡನೇ ದಿನ ಹಾಗೂ ಎರಡನೇ ದಿನಕ್ಕಿಂತ ಮೂರನೇ ದಿನ ಹೆಚ್ಚು ಪ್ರದರ್ಶನಗಳು ಹಾಗೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಂತಾರ ಕಾಣುತ್ತಿದ್ದು ಸಿನಿರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

ಹೀಗೆ ಯಶಸ್ಸು ಸಾಧಿಸಿದ ಕಾಂತಾರ ಚಿತ್ರತಂಡ ಸಿನಿಮಾ ಬಿಡುಗಡೆಯಾದ ಮಾರನೇ ದಿನವೇ ಸಕ್ಸಸ್ ಮೀಟ್ ಅಂಗವಾಗಿ ಪತ್ರಿಕಾಗೋಷ್ಟಿಯನ್ನು ನಡೆಸಿದೆ. ನಟ ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸೇರಿ ಹಲವರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಕಾರ್ತಿಕ್ ಗೌಡ ಚಿತ್ರ ಯಾವ ರೀತಿ ಅಬ್ಬರಿಸುತ್ತಿದೆ, ಬುಕಿಂಗ್ ಹೇಗಿದೆ ಹಾಗೂ ಕಲೆಕ್ಷನ್ ಯಾವ ರೀತಿ ಇದೆ ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಂಡರು. ರಿಷಬ್ ಸಿನಿ ಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕಾರ್ತಿಕ್ ಗೌಡ ನಿರ್ಮಾಪಕ ವಿಜಯ್ ಕಿರಗಂದೂರು ಪರವಾಗಿ ನಾನಿಲ್ಲಿ ಬಂದಿದ್ದೇನೆ ಎಂದು ಮಾತನ್ನು ಆರಂಭಿಸಿದರು. ಮೊದಲಿಗೆ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡಿದವರಿಗೆ ಕ್ರಮವಾಗಿ ಕೃತಜ್ನತೆಯನ್ನು ಸಲ್ಲಿಸಿದ ಕಾರ್ತಿಕ್ ಗೌಡ ಚಿತ್ರ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚೆನ್ನಾಗಿ ರನ್ ಹಾಗೂ ಕಲೆಕ್ಷನ್ ಮಾಡ್ತಿದೆ ಎಂದಿದ್ದಾರೆ. ಮುಕ್ತವಾಗಿ ಹೇಳಬೇಕೆಂದರೆ ರಿಷಬ್ ಶೆಟ್ಟಿ ವೃತ್ತಿ ಜೀವನದಲ್ಲಿಯೇ ಇದು ಬಿಗ್ಗೆಸ್ಟ್ ಕಲೆಕ್ಷನ್ ಮಾಡಿರುವ ಸಿನಿಮಾ ಎಂದ ಕಾರ್ತಿಕ್ ಗೌಡ ನಂಬರ್ ಮಾತ್ರ ಹೇಳುವುದಿಲ್ಲ ಎಂದು ನಗುತ್ತಲೇ ಜಾರಿಕೊಂಡರು. ಈ ಮೂಲಕ ರಿಷಬ್ ಶೆಟ್ಟಿ ಅಭಿನಯದ ಹಿಂದಿನ ಚಿತ್ರಗಳು ಮಾಡದ ರೀತಿಯ ಓಪನಿಂಗ್ ಕಲೆಕ್ಷನ್ ಅನ್ನು ಕಾಂತಾರ ಮಾಡಿರುವುದು ಖಚಿತವಾಗಿದೆ.

ಎರಡೇ ದಿನಕ್ಕೆ 10 ಕೋಟಿ ಎನ್ನಲಾಗ್ತಿದೆ

ಕಾಂತಾರ ಶುಕ್ರವಾರ ಹಾಗೂ ಶನಿವಾರ ವಿಶ್ವದಾದ್ಯಂತ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಅಂಕಿಅಂಶವನ್ನು ಬಾಕ್ಸ್ ಆಫೀಸ್ ಪರಿಣತರು ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಚಿತ್ರ ಕಾಣುತ್ತಿದ್ದು ಓವರ್ ಸೀಸ್ ಚಿತ್ರಮಂದಿರಗಳಲ್ಲಿಯೂ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಹೀಗಾಗಿ ಚಿತ್ರ ಎರಡೇ ದಿನಕ್ಕೆ 10 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಮೂರನೇ ದಿನವಾದ ಭಾನುವಾರ ಮತ್ತಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಗೆಲುವಿನ ನಾಗಾಲೋಟ ಮುಂದುವರಿಸಿದ ಹೊಂಬಾಳೆ ಫಿಲ್ಮ್ಸ್ ನಿನ್ನಿಂದಲೇ ಮತ್ತು ಮಾಸ್ಟರ್ ಪೀಸ್ ರೀತಿಯ ತುಸು ಆವರೇಜ್ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ರಾಜಕುಮಾರ ಚಿತ್ರದ ಮೂಲಕ ಶುರುಮಾಡಿದ ತನ್ನ ಗೆಲುವಿನ ನಾಗಾಲೋಟವನ್ನು ಕೆಜಿಎಫ್ ಸರಣಿ, ಯುವರತ್ನ ಹಾಗೂ ಇದೀಗ ಕಾಂತಾರ ಮೂಲಕವೂ ಸಹ ಮುಂದುವರಿಸಿದೆ. ಇದಾದ ಬಳಿಕ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಬಿಡುಗಡೆಯಾಗಲಿರುವ ಮುಂದಿನ ಎಲ್ಲಾ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುವ ಸಾಮರ್ಥ್ಯ ಇರುವಂಥ ಚಿತ್ರಗಳೇ ಆಗಿವೆ.