ಮೊದಲು ರೈತರಿಗೆ ಪರಿಹಾರ ಕೊಡಿ; ಬಿ.ಎಸ್.ಯಡಿಯೂರಪ್ಪ ಸಲಹೆ

ಬೆಳಗಾವಿ: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಕೇಂದ್ರ ಸರಕಾರದ ಅನುದಾನಕ್ಕೆ ಕಾಯದೇ ತತ್‌ಕ್ಷಣ ಪರಿಹಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ.
ಅವರ ಸಲಹೆಗೆ ವಿಪಕ್ಷದ ಸದಸ್ಯರೂ ಸಹಮತ ವ್ಯಕ್ತಪಡಿಸಿದ್ದು, ರಾಜ್ಯ ಸರಕಾರ ಇತರ ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ಮೊದಲು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಪ್ರವಾಹದ ಕುರಿತು ನಿಯಮ 69ರ ಅಡಿಯಲ್ಲಿ ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯಆರ್. ವಿ. ದೇಶಪಾಂಡೆ ಮಾತಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಅತಿವೃಷ್ಟಿ ಹಾನಿ ವಿಚಾರವಾಗಿ ದೇಶಪಾಂಡೆ ಮಾತು ವಾಸ್ತವಿಕ ಸತ್ಯ. ಕಳೆದ 40-50 ವರ್ಷದಲ್ಲಿ ಅತಿವೃಷ್ಟಿಯಿಂದ ರೈತ ಬೀದಿ ಪಾಲಾಗಿದ್ದಾನೆ ಎಂದರು.
ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ, ಅವರಿಗೂ ವಾಸ್ತವಿಕ ಸ್ಥಿತಿ ಗೊತ್ತಿದೆ. ಕೇಂದ್ರ ಸರಕಾರ ತಜ್ಞರ ಸಮಿತಿ ಕಳಿಸಿ ಪರಿಶೀಲಿಸಲಿದೆ. ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಹೋಗಬೇಡಿ, ಬೇರೆ ಎಲ್ಲ ಕೆಲಸ ಬದಿಗೊತ್ತಿ ದೇಶಪಾಂಡೆ ಅವರ ಮಾತನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರ ನೀಡಿ ಎಂದರು.
ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದವರ ಕೂಲಿಯನ್ನು 1-2 ತಿಂಗಳು ಕೊಡದಿದ್ದರೆ ಅವರ ಜೀವನ ಸಾಗುವುದು ಹೇಗೆ? ರೈತರಿಗೆ ಬಿತ್ತನೆ ಬೀಜಕ್ಕೂ ಜೇಬಲ್ಲಿ ಹತ್ತು ಪೈಸೆ ಇಲ್ಲದಂತಹ ಸನ್ನಿವೇಶ ಇದೆ. ರಾಜ್ಯದ ಬೊಕ್ಕಸದಿಂದ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಕೊಡುವ ಹಣ ನಿಲ್ಲಿಸಿ ಇದಕ್ಕೆ ಆದ್ಯತೆ ಕೊಟ್ಟು ಕೂಲಿ ಕಾರ್ಮಿಕರ ರಕ್ಷಣೆ ಮಾಡಿ. ಸದನದಲ್ಲಿ ಎಲ್ಲರ ಅಭಿಪ್ರಾಯ ಒಂದೇ ಆಗಿದೆ. ದುಡಿಮೆ ಮಾಡಿದ್ದ ರೈತ ಅದನ್ನು ಕಳೆದುಕೊಂಡು ಬೀದಿಯಲ್ಲಿದ್ದಾನೆ. ಆದ್ಯತೆಯಲ್ಲಿ ಹಣ ನೀಡಿ ರೈತನ ರಕ್ಷಣೆ ಮಾಡಬೇಕು ಎಂದು ಬಿಎಸ್‌ವೈ ಮನವಿ ಮಾಡಿದರು.
ಅವರ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಬೆಂಬಲ ಸೂಚಿಸಿ, ಯಡಿಯೂರಪ್ಪ ಮಾತಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಸರಕಾರ ತತ್‌ಕ್ಷಣ ನಿರ್ಧಾರ ತೆಗೆದುಕೊಂಡು ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ಜೆಡಿಎಸ್ ಸದಸ್ಯ ಎಚ್. ಡಿ. ರೇವಣ್ಣ ಅವರೂ ಬೆಂಬಲ ವ್ಯಕ್ತಪಡಿಸಿದರು.
ಅಕಾಲಿಕ ಮಳೆಯಿಂದ ಉಂಟಾದ ಬೆಳೆ ಹಾಗೂ ಮನೆ ಹಾನಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಪರಿಹಾರ ಕೊಡಲಿ. ಡಬಲ್ ಇಂಜಿನ್ ಸರ್ಕಾರ ಎಂದು ಪ್ರಧಾನಿ ಹೇಳುತ್ತಾರೆ. ಅದು ರೈತರ ಪರವಾಗಿ ಏಕೆ ಕಣ್ಣು ತೆರೆಯುತ್ತಿಲ್ಲ? ಬಂಡೆಪ್ಪ ಕಾಶಂಪೂರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ