ಡಿಸಿ ಕಚೇರಿಗೆ ಕಬ್ಬು ಬೆಳೆಗಾರರ ಮುತ್ತಿಗೆ

ಧಾರವಾಡ: ಕಬ್ಬು ಎಫ್‌ಆರ್‌ಪಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡು, ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ಕೈಗೊಂಡ ಕಬ್ಬು ಬೆಳೆಗಾರರು, ಪ್ರವೇಶ ದ್ವಾರಕ್ಕೆ ಹಾಕಿದ್ದ ಬ್ಯಾರಿಕೇಡ್ ಕಿತ್ತೆಸೆದು ಪೊಲೀಸರನ್ನು ಹಿಮ್ಮೆಟ್ಟಿಸಿ ಡಿಸಿ ಕಚೇರಿ ಆವರಣಕ್ಕೆ ನುಗ್ಗಿದರು. ಬ್ಯಾರಿಕೇಡ್ ತಳ್ಳಾಡುವ ಸಂದರ್ಭದಲ್ಲಿ ಕುರಬೂರು ಶಾಂತಕುಮಾರ ಅವರಿಗೆ ಪೆಟ್ಟು ಬಿದ್ದು, ಕೆಳಗೆ ಬಿದ್ದ ಘಟನೆ ನಡೆಯಿತು. ಇದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಆಗಮಿಸಿ ಮನವಿ ಸ್ವೀಕರಿಸಿದ ಡಿಸಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲಾಡಳಿತ ರೈತರ ಪರವಾಗಿದೆ. ಜತೆಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. ಆದರೆ, ಪಟ್ಟು ಬಿಡದ ರೈತರು ಸ್ಥಳಕ್ಕೆ ಸಕ್ಕರೆ ಖಾತೆ ಸಚಿವರು ಆಗಮಿಸಿ ನಮ್ಮ ಸಮಸ್ಯೆ ಕೂಡಲೇ ಪರಿಹರಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ಆವರಣದಲ್ಲಿಯೇ ಅಹೋರಾತ್ರಿ ಧರಣಿ ಮಾಡುವುದಾಗಿ ನಿರ್ಧಾರ ಪ್ರಕಟಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ನಿಜಗುಣ ಕೆಲಗೇರಿ, ಉಳುವಪ್ಪ ಬೆಳಗೇರಿ, ಕುಮಾರ ಬುಬಾಟಿ, ವಾಸು ಡಾಕಪ್ಪನವರ, ಬಸವನಗೌಡ ಸಿದ್ಧನಗೌಡರ, ಎಂ.ವಿ. ಗಾಡಿ ಸೇರಿದಂತೆ ಹಳಿಯಾಳ, ಧಾರವಾಡ ಹಾಗೂ ಸುತ್ತಮುತ್ತಲಿನ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.
ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಣಿಸುತ್ತಿಲ್ಲ
ಸರಕಾರ ಅಂಗೈಯಲ್ಲಿ ಆಕಾಶ ತೋರಿಸಿ ರೈತರನ್ನು ಮರುಳು ಮಾಡುವುದು ಬೇಡ. ಕಬ್ಬು ಬೆಳೆಗಾರರನ್ನು ಸಕ್ಕರೆ ಕಾರ್ಖಾನೆ ಮಾಲೀಕರ ಹರಕೆಯ ಕುರಿ ಮಾಡಬಾರದು. ರೈತರು 4 ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರಕಾರ ಮೌನವಾಗಿರುವುದು ಬೆಕ್ಕಿಗೆ ಚೆಲ್ಲಾಟ ಇಲಿಗೆ ಸಂಕಟ ಅನ್ನುವಂತಾಗಿದೆ. ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಣಿಸುತ್ತಿಲ್ಲ. ಮುಂದೆ ಚುನಾವಣೆ ಬರುತ್ತಿದ್ದು, ರಾಜ್ಯದ 38 ಸಕ್ಕರೆ ಕಾರ್ಖಾನೆ ಮಾಲೀಕತ್ವದ ಶಾಸಕರು, ಸಂಸದರನ್ನು ಸೋಲಿಸಿ ಮನೆಗೆ ಕಳುಹಿಸುವ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ರಾಜ್ಯಅಧ್ಯಕ್ಷ ಕುರಬೂರು ಶಾಂತಕುಮಾರ ಎಚ್ಚರಿಕೆ ನೀಡಿದರು.
ಪ್ರಮುಖ ಬೇಡಿಕೆಗಳು
ಎಫ್‌ಆರ್‌ಪಿ ಬೆಲೆ ಕನಿಷ್ಟ ಇಳುವರಿಗೆ 3500 ರೂ. ನಿಗದಿ ಮಾಡಬೇಕು.
ರೈತರ ಮೇಲಿನ ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚ ಕಡಿತ ಮಾಡಬೇಕು.
ಕಟಾವು ವಿಳಂಬ ಮಾಡಿದ ಅವಧಿಗೆ ಹೆಚ್ಚುವರಿ ದರ ಕೊಡಬೇಕು.
ರೈತ-ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಬೇಕು.
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು.
ಸಿಬಿಲ್ ಸ್ಕೋರ್ ಪರಿಗಣಿಸಿ ರೈತರಿಗೆ ಸಾಲ ನೀಡುವ ಪದ್ಧತಿ ಕೈ ಬಿಡಬೇಕು.
ಇಷ್ಟೊತ್ತಿಗಾಗಲೇ ಹಳಿಯಾಳ ಸಕ್ಕರೆ ಕಾರ್ಖಾನೆಯಲ್ಲಿ ಕನಿಷ್ಟ ಒಂದು ಲಕ್ಷ ಟನ್ ಕಬ್ಬು ನುರಿಕೆಯಾಗುತ್ತಿತ್ತು. ಆದರೆ ಕಾರ್ಖಾನೆ ಮಾಲೀಕರು ಮತ್ತು ಗ್ಯಾಂಗ್ ನಿರ್ವಹಿಸುವ ಮಧ್ಯವರ್ತಿಗಳಿಂದಾಗಿ ಇನ್ನೂ ಧಾರವಾಡ ಮತ್ತು ಹಳಿಯಾಳ ತಾಲೂಕಿನ ರೈತರ ಕಬ್ಬು ಕಟಾವು ಆಗಿಲ್ಲ. ಕಬ್ಬು ಕಟಾವಿಗೆ ಬಂದ್ ಗ್ಯಾಂಗ್‌ಗಳು ಮರಳಿ ಹೋಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸಕ್ಕರೆ ಸಚಿವರು ಕ್ರಮ ವಹಿಸಬೇಕು. –ಬಸವಣ್ಣೆಪ್ಪ ಅಂಗಡಿ, ಹಳಿಯಾಳದ ಕಬ್ಬು ಬೆಳೆಗಾರ