ಚಿತ್ರಮಂದಿರಕ್ಕೆ ಹೊರಗಿನ ತಿಂಡಿ-ತಿನಿಸು; ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಚಿತ್ರಮಂದಿರಕ್ಕೆ ಹೊರಗಿನ ತಿಂಡಿ-ತಿನಿಸು; ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಚಿತ್ರಮಂದಿರಗಳಿಗೆ ಹೊರಗಿನಿಂದ ತಿಂಡಿ ತಿನಿಸು ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿಯಮ ಇದ್ದರೂ ಕೆಲವರು ಹೊರಗಡೆಯಿಂದ ತಿಂಡಿ ಕೊಂಡೊಯ್ಯುತ್ತಿದ್ದರು. ಅಂಥವರಿಗೆ ಶಾಕ್ ಕೊಟ್ಟು ಚಿತ್ರಮಂದಿರಗಳ ಮಾಲೀಕರ ಪರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಚಿತ್ರಮಂದಿರಗಳು ಸಿನಿಮಾ ಹಾಲ್‌ಗಳ ಒಳಗೆ ಆಹಾರ ಮತ್ತು ಪಾನೀಯಗಳ ಮಾರಾಟಕ್ಕೆ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಲು ಸಂಪೂರ್ಣವಾಗಿ ಅರ್ಹವಾಗಿವೆ ಮತ್ತು ಆವರಣದೊಳಗೆ ಹೊರಗಿನ ಆಹಾರ ಪದಾರ್ಥಗಳನ್ನು ನಿಷೇಧಿಸುವ ಹಕ್ಕನ್ನು ಹೊಂದಿವೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, "ಸಿನಿಮಾ ಹಾಲ್ ನಲ್ಲಿ ಮಾರಾಟವಾಗುವ ಪದಾರ್ಥಗಳನ್ನು ಗ್ರಾಹಕರು ಸೇವಿಸದಿರುವ ಆಯ್ಕೆಯನ್ನು ಹೊಂದಿರುತ್ತಾರೆ" ಎಂದು ಹೇಳಿದೆ. ಆದರೆ, ಪೋಷಕರು ತಮ್ಮ ಶಿಶುಗಳಿಗೆ ಕೊಂಡೊಯ್ಯುವ ಆಹಾರವನ್ನು ಚಿತ್ರಮಂದಿರಗಳು ವಿರೋಧಿಸಬಾರದು ಎಂದು ಪೀಠವು ಪುನರುಚ್ಚರಿಸಿದೆ.

ವಿಚಾರಣೆಯ ವೇಳೆ ಸಿಜೆಐ , "ಸಿನೆಮಾಗಳು ಖಾಸಗಿ ಆಸ್ತಿಗಳು. ಮಾಲೀಕರು ನಿಷೇಧದ ಹಕ್ಕುಗಳ ಬಗ್ಗೆ ನಿರ್ಧರಿಸಬಹುದು. ಒಬ್ಬರು ಚಿತ್ರಮಂದಿರದೊಳಗೆ ಜಿಲೇಬಿ (ಸಿಹಿ ಖಾದ್ಯ) ತೆಗೆದುಕೊಳ್ಳಲು ಬಯಸಿದರೆ, ಅದನ್ನು ಆಕ್ಷೇಪಿಸುವ ಹಕ್ಕು ಮಾಲೀಕರಿಗೆ ಇದೆ. ಜಿಲೇಬಿಯನ್ನು ತಿಂದ ನಂತರ, ವ್ಯಕ್ತಿಯು ಕುರ್ಚಿಯಿಂದ ತನ್ನ ಕೈಗಳನ್ನು ಒರೆಸಬಹುದು ಮತ್ತು ಅನಗತ್ಯವಾಗಿ ಅದನ್ನು ಹಾಳು ಮಾಡಬಹುದು" ಎಂದು ಹೇಳಿದರು.