ರಾಹುಲ್ ಗಾಂಧಿಗೆ KGF ಚಿತ್ರತಂಟದಿಂದ ಶಾಕ್ : ಕೈ ನಾಯಕನ ಮೇಲೆ ಕಾಪಿರೈಟ್ ಕೇಸ್..!

ಬೆಂಗಳೂರು : ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶದ ಎಲ್ಲಾ ರಾಜ್ಯಗಳನ್ನು ಸುತ್ತಿ ಜನ ಜೀವನದ ಕಷ್ಟ ನಷ್ಟಗಳನ್ನು ಅರಿಯುತ್ತಿದ್ದಾರೆ. ಇನ್ನು ಯಾತ್ರೆಯ ವಿಡಿಯೋಗಳಿಗೆ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಹಾಡುಗಳನ್ನು ಬಳಕೆ ಮಾಡಿದ ಹಿನ್ನೆಲೆ ಕೆಜಿಎಫ್ ಚಿತ್ರತಂಡ ರಾಹುಲ್ ಗಾಂಧಿ ಮೇಲೆ ಕಾಪಿರೈಟ್ ದೂರು ದಾಖಲಿಸಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗವು ಪಾದಯಾತ್ರೆಯನ್ನು ಹೈಲೈಟ್ ಮಾಡುತ್ತಿದೆ. ಇನ್ನು ಯಾತ್ರೆಯ ದೃಶ್ಯಗಳಿಗೆ ಕೆಲವು ಸಿನಿಮಾ ಹಾಡುಗಳ ಜೊತೆಯಲ್ಲಿ
ವೀಡಿಯೋಗಳನ್ನು ಬೆರೆಸಿ ಜನರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಅದರ ಭಾಗವಾಗಿ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ವಿಭಾಗ ಕೆಜಿಎಫ್ ಸಿನಿಮಾದ ಹಾಡುಗಳನ್ನು ಬಳಕೆ ಮಾಡಿದೆ.
2018ರಲ್ಲಿ ಬಿಡುಗಡೆಯಾದ ಕೆಜಿಎಫ್ ಮೊದಲ ಭಾಗ ಹಿಟ್ ಆಗಿತ್ತು. ಅದರ ಮುಂದುವರಿದ ಭಾಗವೂ ಸಹ ಸಿನಿರಂಗದ ದಾಖಲೆ ಧೂಳಿಪಟ ಮಾಡಿತ್ತು. ರವಿ ಬಸ್ರೂರ್ ಅವರ ಹಾಡುಗಳು ಕೂಡ ಸಿನಿಮಾ ಎಷ್ಟು ಹಿಟ್ ಆಗಿತ್ತೋ ಅಷ್ಟೇ ಹಿಟ್ ಆಗಿವೆ. ಸದ್ಯ ಕೆಜಿಎಫ್ ರೀತಿಯಲ್ಲಿಯೇ ರಾಹುಲ್ ಗಾಂಧಿಗಾಗಿ ಹಾಡುಗಳನ್ನು ರೆಡಿ ಮಾಡಿದ್ದರಿಂದ ಕೆಜಿಎಫ್ ಮೇಕರ್ಸ್ ಕಾಪಿರೈಟ್ ಕೋರಿ ಕೇಸ್ ಹಾಕಿದ್ದಾರಂತೆ.
ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ವಿರುದ್ಧ ಈ ಹಕ್ಕುಸ್ವಾಮ್ಯ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಈ ಚಿತ್ರದ ಸಂಗೀತ ಹಕ್ಕುಗಳನ್ನು ಎಮಾರ್ಟಿ ಎಂಬ ಸಂಗೀತ ಸಂಸ್ಥೆ ಖರೀದಿಸಿದೆ. ಕೆಜಿಎಫ್ 2 ರ ರಣಧೀರ ಹಾಡನ್ನು ಯಾವುದೇ ಅನುಮತಿಯಿಲ್ಲದೆ ರಾಹುಲ್ ಗಾಂಧಿ ಅವರ ದೃಶ್ಯಗಳಿಗೆ ಬಳಸಿದ್ದಾರೆ ಎಂದು ಎಮಾರ್ಟಿ ಆರೋಪಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.