ನನ್ನ ವಿರುದ್ಧ ಶ್ರೀಗಳಿಂದ ಹೈಕಮಾಂಡ್‌ಗೆ ಪತ್ರ ಸತ್ಯಕ್ಕೆ ದೂರ: ಶಾಸಕ ರಾಮಪ್ಪ
ಹರಿಹರ: 'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಬಾರದು ಎಂದು ಕಾಗಿನೆಲೆ ಕನಕ ಗುರುಪೀಠ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಸ್ವಾಮೀಜಿಯವರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು' ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹರಿಹರ ಕ್ಷೇತ್ರ ಮಠ, ಪೀಠಗಳ ತವರೂರು. ಎಲ್ಲ ಸಮುದಾಯಗಳ ಮಠಾಧೀಶರು, ಧರ್ಮಗುರುಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಹೈ ಕಮಾಂಡ್‌ಗೆ ಪತ್ರ ಬರೆಯಲಾಗಿದೆ ಎಂಬ ವದಂತಿ ಕಿಡಿಗೇಡಿಗಳ ಕೃತ್ಯ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಇತ್ತೀಚಿಗೆ ಪಂಚಮಸಾಲಿ ಮಠದಲ್ಲಿ ನಡೆದ ಹರಜಾತ್ರೆಗೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ವಚನಾನಂದ ಶ್ರೀಗಳು ನನ್ನನ್ನು ಉದ್ದೇಶಿಸಿ 'ರಾಮಪ್ಪನವರು ಅಜಾತ ಶತ್ರು ಆಗಿದ್ದಾರೆ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದು ಎಲ್ಲಾ
ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ' ಎಂದು ಹೊಗಳಿದ್ದರು. ನಮ್ಮ ಸಮುದಾಯದ ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಶ್ರೀಗಳು ಎಂದಿಗೂ ನನ್ನೊಂದಿಗಿದ್ದಾರೆ. ಅಲ್ಲದೆ ಯಾರೇ ಪಕ್ಷದ ಟಿಕೆಟ್ ತಂದರೂ ಅವರಿಗೆ ನನ್ನ ಆಶೀರ್ವಾದವಿದೆ ಎಂದು ಹೇಳಿದ್ದಾರೆ' ಎಂದರು.
'ಶೀಘ್ರವೇ ನಾನು ಖುದ್ದಾಗಿ ಎರಡೂ ಪೀಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಗೊಂದಲವನ್ನು ನಿವಾರಿಸುತ್ತೇನೆ. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮದ ಮೊರೆ ಹೊಗಲಾಗುವುದು' ಎಂದರು.
'ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗಳು ಮಾಧ್ಯಮದಲ್ಲಿ ಬರುತ್ತಿರುವುದು ಕಪೋಲ, ಕಲ್ಪಿತವಾಗಿದೆ. ಈ ಬಾರಿಯೂ ನನಗೆ ಪಕ್ಷದ ಬಿ ಫಾರಂ ಸಿಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.