ಕೇದಾರನಾಥ ಹೆಲಿಕಾಪ್ಟರ್ ಪತನದಲ್ಲಿ ಏಳು ಮಂದಿ ಸಾವು : ಮೃತರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಅಮಿತ್ ಶಾ |

ನವದೆಹಲಿ : ಉತ್ತರಾಖಂಡದ ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಪುಷ್ಕರ್ ಧಾಮಿ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.
ಕೇದಾರನಾಥ ಧಾಮದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗರುಡ್ ಚಟ್ಟಿಯಲ್ಲಿ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ಐಕಾನಿಕ್ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಇದಕ್ಕೆ ಕೆಟ್ಟ ಹವಾಮಾನವೇ ಕಾರಣ ಎಂದು ಎನ್ನಲಾಗುತ್ತಿದೆ.
ಈ ಕುರಿತಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಅಪಘಾತದಿಂದ ದುಃಖವಾಗಿದೆ. ಈ ದುರಂತದ ಸಮಯದಲ್ಲಿ, ಸಮಯದಲ್ಲಿ, ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಧಾಮಿ ಮತ್ತು ಇತರೆ ಹಲವು ನಾಯಕರು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಕೇದಾರನಾಥದಲ್ಲಿ ಭಕ್ತರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಘಟನೆ ಅತ್ಯಂತ ದುಃಖಕರವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ದೇವರು ಅವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಕೇದಾರನಾಥದ ಬಳಿಯ ಗರುಡ ಚಟ್ಟಿಯಲ್ಲಿ ದುರದೃಷ್ಟಕರ ಹೆಲಿಕಾಪ್ಟರ್ ಅಪಘಾತದಲ್ಲಿ ಕೆಲವು ಸಾವು ನೋವುಗಳ ಬಗ್ಗೆ ಬಹಳ ದುಃಖದ ವರದಿಗಳಿವೆ. ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತದ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ತಲುಪಿವೆ. ದುರಂತ ಘಟನೆಯ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಧಾಮಿ ಹೇಳಿದ್ದಾರೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿವರವಾದ ತನಿಖೆಗೆ ಆದೇಶಿಸಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ವಿಟಿ-ಆರ್‌ಪಿಎನ್ ಎಂದು ನೋಂದಾಯಿಸಲಾಗಿದ್ದು, ಇದು ದೆಹಲಿ ಮೂಲದ ಆರ್ಯನ್ ಏವಿಯೇಷನ್‌ಗೆ ಸೇರಿದೆ ಎನ್ನಲಾಗುತ್ತಿದೆ.