ಯೂಟ್ಯೂಬ್ ನೋಡಿ ATM ದರೋಡೆಗೆ ಯತ್ನ : ಪೊಲೀಸರ ಬಲೆಗೆ ಬಿದ್ದ ಆರೋಪಿಗಳು

ಬೆಂಗಳೂರು: ಯೂಟ್ಯೂಬ್ ನೋಡಿ ತರಬೇತಿ ಪಡೆದು ಎಟಿಎಂ ಕೇಂದ್ರಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಅಸ್ಸಾಂ ಮೂಲದ ಐವರು ಗ್ಯಾಂಗ್ ನ್ನು ಜಿಗಣಿ ಪೋಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಬಾಬುಲ್ ನೋನಿಯಾ, ಮಹ್ಮದ್ ಆಸೀಪ್ ಉದ್ದಿನ್, ತಪಸ್ ಬಿಸ್ವಾಸ್, ದಿಲ್ವಾರ್ ಹುಸೇನ್ ಲಷ್ಕರ್, ರೂಹುಲ್ ಅಮೀನ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಕೆಲ ವರ್ಷಗಳ ಹಿಂದೆ ಅತ್ತಿಬೆಲೆ ಸಮೀಪದ ತಿರುಪಾಳ್ಯಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು.ಶೀಘ್ರದಲ್ಲೇ ಹೆಚ್ಚು ಹಣ ಸಂಪಾದನೆ ಮಾಡುವ ಸಂಚು ಮಾಡಿದ್ದ ಆರೋಪಿಗಳು ಯೂಟ್ಯೂಬ್‌ನಲ್ಲಿ ಎ ಟಿ ಎಂ ಕಳ್ಳತನ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಬಳಿಕ ಸಿಲಿಂಡರ್ ಕಳ್ಳತನ ಮಾಡಿ ಗ್ಯಾಸ್ ಕಟರ್ ಖರೀದಿಸಿ ಮನೆಯಲ್ಲಿ ಕಬ್ಬಿಣವನ್ನು ಕಟ್ ಮಾಡಿ ತರಬೇತಿ ಪಡೆಯುತ್ತಾರೆ.
ಅಲ್ಲಿಂದ ಸಂಚು ರೂಪಿಸಿದ ಐವರ ತಂಡ ಆಟೋದಲ್ಲಿ ಕಳೆದ ತಿಂಗಳ 22ರಂದು ರಾತ್ರಿ ಶ್ರೀರಾಂಪುರದ ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳನಕ್ಕೆ ಮುಂದಾಗಿದ್ದರು. ಈ ವೇಳೆ ಸೈರನ್ ಬಂದಾಗ ಸಿಲಿಂಡರ್, ಗ್ಯಾಸ್ ಕಟರ್ ಅಲ್ಲಿಯೇ ಬಿಟ್ಟು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ಜಿಗಣಿ ಪೋಲೀಸ್ ಇನ್ಸ್ ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿಕೊಂಡು ಸುಮಾರು 250 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಅಸ್ಸಾಂ ಕಡೆ ಪರಾರಿಯಾಗಲು ಮುಂದಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.