ಕಾಂಗ್ರೆಸ್ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಕೊಟ್ಟ ಮಮತಾ ಬ್ಯಾನರ್ಜಿ ಆ ಹೇಳಿಕೆ

ಕಾಂಗ್ರೆಸ್ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಕೊಟ್ಟ ಮಮತಾ ಬ್ಯಾನರ್ಜಿ ಆ ಹೇಳಿಕೆ

ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಬಹುಷಃ ಸ್ವಾತಂತ್ರ್ಯಾನಂತರ ಈ ರೀತಿಯ ಹಿನ್ನಡೆಯನ್ನು ಕಂಡಿರಲಿಕ್ಕಿಲ್ಲ. ದೇಶದ ಎಲ್ಲೆಲ್ಲೂ ಕಾಂಗ್ರೆಸ್ ಸರಕಾರ ಅಂತ ಇದ್ದಿದ್ದು, ಈಗ, ಕಾಂಗ್ರೆಸ್ ಎಲ್ಲಿದೆ ಎಂದು ಕೇಳುವ ಪ್ರಶ್ನೆ ಉದ್ಭವಾಗಿದೆ.

ಇದಕ್ಕೆ ಕಾರಣ ಏನಿರಬಹುದು?ಪಕ್ಷದಲ್ಲಿ ಹಲವು ಸುಖಗಳನ್ನು ಅನುಭವಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡರೇ ಪಕ್ಷ ಸಾಗುತ್ತಿರುವ ದಾರಿಯ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದ್ದುಂಟು. ಆದರೆ, ಅವರ ಧ್ವನಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದೇ ಹೆಚ್ಚು.

ಒಂದು ಕಾಲದಲ್ಲಿ ಹೈಕಮಾಂಡ್ ಎಂದರೆ ಹೇಗಿರಬೇಕು ಎನ್ನುವ ಲೀಡರ್‌ಶಿಪ್ ಕ್ವಾಲಿಟಿಯನ್ನು ಬಿಜೆಪಿ ಈಗಾಗಲೇ ಕಾಂಗ್ರೆಸ್ಸಿನಿಂದ ಕಿತ್ತುಕೊಂಡಾಗಿದೆ. ಹೋಗಲಿ, ಕಾಂಗ್ರೆಸ್ಸಿನಲ್ಲಿ ಯುವ ಮುಖಂಡರಿಗೆ ಬರವೇ? ಅದೂ ಇಲ್ಲಾ..ಹಾಗಾದರೆ, ಗಾಂಧಿ ಪರಿವಾರದಿಂದ ಹೊರತಾದವರನ್ನು ಸ್ವೀಕರಿಸುವ ಗುಣ ಕಾಂಗ್ರೆಸ್ಸಿನ ದೊಡ್ಡವರಿಗೆ ಇಲ್ಲವೇ ಎನ್ನುವುದು ಕಾಂಗ್ರೆಸ್ಸಿನ ಕಟ್ಟಕಡೆಯ ಕಾರ್ಯಕರ್ತರಲ್ಲಿ ಕಾಡುತ್ತಿರುವ ನೋವು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ನೀಡಿದ ಹೇಳಿಕೆ, ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಏನು ಮಾನ್ಯತೆ ಇದೆ ಎನ್ನುವುದನ್ನು ತೋರಿಸಿಕೂಡುತ್ತದೆ.

ಅಧಿಕಾರ ಹೋದಕಡೆ ಮರು ಸರಕಾರ ಸ್ಥಾಪಿಸುವ ಅವಕಾಶವಿದ್ದರೂ, ಕಾಂಗ್ರೆಸ್ ಕೈ ಚೆಲ್ಲುತ್ತಾ ಸಾಗಿತು. ಯಾತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ಪಕ್ಷದ ಹಿರಿಯರ ಧ್ವನಿಯನ್ನು ಅಡುಗಿಸಲಾಯಿತು. ಯುವಕರಿಗೆ ಪ್ರಾತಿನಿಧ್ಯತೆ ನೀಡಬೇಕು ಎನ್ನುವ ಕೂಗನ್ನು ವ್ಯವಸ್ಥಿತವಾಗಿ ಹದ್ದುಬಸ್ಥಿನಲ್ಲಿ ಇಡಲಾಯಿತು. ಸೋಲೇ ಕಾಣದ ಸರದಾರ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ, ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡುತ್ತಾರೆ ಎಂದರೆ, ಅದಕ್ಕೆ ಸದನದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ನಾಯಕರ ಕೊರತೆ ಎಂದೇ ವ್ಯಾಖ್ಯಾನಿಸಬಹುದಾಗಿದೆ.

ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಬೇಕೆಂದು ಏನಾದರೂ ಇದೆಯಾ

ದೆಹಲಿಗೆ ಹೋದಾಗಲೆಲ್ಲಾ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಬೇಕೆಂದು ಏನಾದರೂ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅನ್ನು ಕಡೆಗಣಿಸಿದ ಮತ್ತೊಂದು ಹೇಳಿಕೆಯನ್ನೂ ಗೋವಾದಲ್ಲಿ ನೀಡಿದ್ದಾರೆ. "ಯುಪಿಎ ಮೈತ್ರಿಕೂಟ ಎನ್ನುವುದು ದೇಶದಲ್ಲಿ ಎಲ್ಲಿದೆ" ಎಂದು ಮಮತಾ ಪ್ರಶ್ನಿಸಿದ್ದರು. ಎನ್ಡಿಎ ಮೈತ್ರಿಕೂಟ ಎಂದಾಗ ಬಿಜೆಪಿಗೆ ಹೇಗೆ ಸಿಂಹಪಾಲೋ ಅದೇ ರೀತಿ ಯುಪಿಎ ಎಂದಾಗ ಅದು ಕಾಂಗ್ರೆಸ್. ಹಾಗಾಗಿ, ಪರೋಕ್ಷವಾಗಿ ಮಮತಾ ಕುಟುಕಿದ್ದು ಕಾಂಗ್ರೆಸ್ ಪಕ್ಷವನ್ನು. ಅದಕ್ಕೆ ಕಾರಣ ಇಲ್ಲದಿಲ್ಲ..ಮಮತಾ ಬ್ಯಾನರ್ಜಿ ಗೆಲುವಿನಲ್ಲಿ ಬಿಜೆಪಿ ಸೋಲನ್ನು ಸಂಭ್ರಮಿಸಿತು.

ಕಳೆದ ಅಂದರೆ 2016ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದದ್ದು 44, ಬಿಜೆಪಿ ಗೆದ್ದಿದ್ದದ್ದು ಕೇವಲ ಮೂರು. 2021ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 77, ಕಾಂಗ್ರೆಸ್ ಸಾಧನೆ ಶೂನ್ಯ. ರಾಜಕೀಯ ಅಂದ ಮೇಲೆ ಏರಿಳಿತ ಸಾಮಾನ್ಯ, ಆದರೆ, ಸೊನ್ನೆ ಸುತ್ತಿದ್ದ ಕಾಂಗ್ರೆಸ್, ಮಮತಾ ಬ್ಯಾನರ್ಜಿ ಗೆಲುವಿನಲ್ಲಿ ಬಿಜೆಪಿ ಸೋಲನ್ನು ಸಂಭ್ರಮಿಸಿತು. ಇದು ಕಾಂಗ್ರೆಸ್ಸಿನ ಬೇಸ್ ಕಾರ್ಯಕರ್ತರ ತೀವ್ರ ಮುಜುಗರಕ್ಕೆ ಕಾರಣವಾಯಿತು. ಹಾಗಾಗಿ.ಬಿಜೆಪಿಯನ್ನು ಸೋಲಿಸಲು ಬಲಿಷ್ಠವಾದ ಒಕ್ಕೂಟ ಬೇಕಾಗಿದೆ.ಬಿಜೆಪಿಯನ್ನು ಸೋಲಿಸಲು ಬಲಿಷ್ಠವಾದ ಒಕ್ಕೂಟ ಬೇಕಾಗಿದೆ, ಅದಕ್ಕೆ ಕಾಂಗ್ರೆಸ್ ನಾವಿಕನಾದರೆ, ದೋಣಿ ಮುಳುಗುವ ಸಾಧ್ಯತೆಯೇ ಹೆಚ್ಚು ಎನ್ನುವ ಸದ್ಯದ ಗ್ರೌಂಡ್ ರಿಯಾಲಿಟಿಯನ್ನು ಮಮತಾ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ರಾಜಕೀಯ ಪಂಡಿತರ ವ್ಯಾಖ್ಯಾನ. ರಾಹುಲ್ ಗಾಂಧಿಯವರನ್ನು ಮುಂದೆ ಬಿಟ್ಟರೆ, ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಪ್ರಶಾಂತ್ ಕಿಶೋರ್ ಕೂಡಾ ಹೇಳಿದ್ದಾರೆ. ಎಲ್ಲವನ್ನೂ ಅವಲೋಕಿಸಿದಾಗ, ವಿರೋಧ ಪಕ್ಷಗಳ ಈ ಬೆಳವಣಿಗೆಯಿಂದಾಗಿ ಬಿಜೆಪಿಗೆ ಅನುಕೂಲವೇ ಹೆಚ್ಚು.