ರಾಯಚೂರು ಜಿಲ್ಲೆಯಲ್ಲಿ ಇಂದು ಸಚಿವ ಆರ್‌.ಅಶೋಕ್‌ ಗ್ರಾಮವಾಸ್ತವ್ಯ

ರಾಯಚೂರು ಜಿಲ್ಲೆಯಲ್ಲಿ ಇಂದು ಸಚಿವ ಆರ್‌.ಅಶೋಕ್‌ ಗ್ರಾಮವಾಸ್ತವ್ಯ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಈ ಬಾರಿ ರಾಯಚೂರಿನ ಅರಕೇರಾದಲ್ಲಿ ನಡೆಯಲಿದ್ದು ಶನಿವಾರ ಮತ್ತು ಭಾನುವಾರ ಕಂದಾಯ ಸಚಿವ ಆರ್‌.ಅಶೋಕ್‌ ಅರಕೇರಾದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

ಇಡೀ ದಿನ ಗ್ರಾಮದಲ್ಲೇ ಇರುವ ಸಚಿವರು ಫ‌ಲಾನುಭವಿಗಳಿಗೆ ಸವಲತ್ತು ವಿತರಣೆ, ಕುಂದುಕೊರತೆ ಸ್ವೀಕಾರ, ಜನರ ಜತೆ ಸಮಾಲೋಚನೆ ನಂತರ ರಾತ್ರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಶನಿವಾರ ಬೆಳಿಗ್ಗೆ 11 ಗಂಟೆಗೆ ಅರಕೇರಾ ಗಾಂಧಿ ಮೈದಾನದಲ್ಲಿ ವಿವಿಧ ಮಳಿಗೆ ಉದ್ಘಾಟನೆ ನೆರವೇರಿಸಿ ಬಳಿಕ ಸಭಾಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲಿದ್ದಾರೆ. ಜನಸ್ಪಂದನ, ಕುಂದು ಕೊರತೆಗಳ ಪರಿಶೀಲನೆ ಹಾಗೂ ಸ್ಥಳೀಯರ ಜತೆ ಕುಂದು ಕೊರತೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಪೌತಿ ಖಾತೆ ಅಭಿಯಾನ ಸಹ ನಡೆಯಲಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಶಿವನಗೌಡ ನಾಯಕ ಮತ್ತು ಸಂಸದರು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಉಪಸ್ಥಿತರಿರಲಿದ್ದಾರೆ.

ಇದು ಕಂದಾಯ ಸಚಿವರ 10ನೇ ಜಿಲ್ಲೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಗಿದ್ದು ರಾಜ್ಯಾದ್ಯಂತ ಈ ವರೆಗೆ ನಡೆದ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ 1,26,384 ಫಲಾನುಭವಿಗಳಿಗೆ ಹಾಗೂ ಇತರೆ ಇಲಾಖೆಯಿಂದ 1,68,987 ಫಲಾನುಭವಿಗಳಿಗೆ, ಒಟ್ಟು 2,95,371 ಜನರಿಗೆ ಸೌಲಭ್ಯಗಳನ್ನು ವಿತರಿಸಲಾಗಿದೆ.