ಮತಾಂತರ ನಿಷೇಧ ಕಾಯಿದೆ: ಬಿಜೆಪಿ, ಕಾಂಗ್ರೆಸ್ 'ಪ್ರಣಯದಾಟ'ದ ಮಧ್ಯೆ ಜೆಡಿಎಸ್ ತಬ್ಬಲಿ?
"ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಮೇಲೆ ನಮಗೆ ಗೌರವವಿದೆ, ಕಾನೂನನ್ನು ಚೆನ್ನಾಗಿ ಅರಿತವರು ನೀವು. ನಿಮ್ಮ ಅವಧಿಯ ವಿಧೇಯಕಕ್ಕೆ ನಾವು ಅಂತಿಮ ಸ್ಪರ್ಷ ನೀಡಿ ಮಂಡಿಸುತ್ತಿದ್ದೇವೆ. ಬೇಕಿದ್ದರೆ ನಿಮ್ಮ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರನ್ನೊಮ್ಮೆ ಕೇಳಿ.
ಇದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಸದನದಲ್ಲಿ ಸರಕಾರದ ಪರವಾಗಿ ಮಸೂದೆಯನ್ನು ಸಮರ್ಥಕೊಂಡಿಸಿದ್ದು. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021, ವಿಧಾನಸಭೆಯಲ್ಲಿ ಧ್ವನಿಮತದಿಂದ ಆಂಗೀಕಾರಗೊಂಡಿದೆ. ಇದಕ್ಕೆ ಮೂಲ ಕಾರಣ, ಯಡಿಯೂರಪ್ಪ ಮತ್ತು ಸಚಿವರಾದ ಮಾಧುಸ್ವಾಮಿ.
ಈ ಮಸೂದೆ ಸದನದಲ್ಲಿ ಚರ್ಚೆಗೆ ಬಂದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವ ರೀತಿಯ ರಾಜಕೀಯ ನಡೆಯಿತು ಎಂದರೆ, ನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಆಡು ಎನ್ನುವ ರೀತಿಯಲ್ಲಿತ್ತು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಅಕ್ಷರಸಃ ಬಡವಾಗಿದ್ದು ಜೆಡಿಎಸ್. ಪಕ್ಷವನ್ನು ಮುನ್ನಡೆಸಬೇಕಾದ ಎಚ್.ಡಿ.ಕುಮಾರಸ್ವಾಮಿಯರೇ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿದ್ದು ಬೆರಳಣಿಕೆಯಷ್ಟು ದಿನಗಳಲ್ಲಿ.
ಈ ವಿಧೇಯಕದ ಮೂಲಕ ಒಂದು ಸತ್ಯವಂತೂ ಹೊರಬಂತು, ಅದು ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಮೂಲ ಮತಬ್ಯಾಂಕ್ ಅನ್ನು ಇನ್ನಷ್ಟು ಭದ್ರಗೊಳಿಸಿಕೊಂಡದ್ದು. ಈ ಮಸೂದೆಯ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲಿಖಿತ ಒಪ್ಪಂದ ನಡೆದಿತ್ತೇ ಎನ್ನುವ ಸಂಶಯ ಬರಲು ಕಾರಣಗಳು ಇಲ್ಲದಿಲ್ಲ. ಅದು ಹೇಗೆ? ಮುಂದೆ ಓದಿ..
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿದ್ದರಾಮಯ್ಯನವರಿಗೆ ಕೊಟ್ಟ ಉತ್ತರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿದ್ದರಾಮಯ್ಯನವರಿಗೆ ಉತ್ತರ ಕೊಡುತ್ತಾ, "ಎಸ್ ಸಿ, ಎಸ್ ಟಿ ಸಮುದಾಯಕ್ಕೆ ವಿಶೇಷ ಭದ್ರತೆಯನ್ನು ನೀಡಬೇಕು ಎನ್ನುವುದು ನಮ್ಮ ಕಾಳಜಿ. ಇದು ನಮ್ಮ ಉದ್ದೇಶ, ನೀವು ಅವರ ಪರವಾಗಿ ಧ್ವನಿ ಎತ್ತಿದವನು ಎಂದು ಹೇಳಿಕೊಳ್ಳುತ್ತಿರುವವರು ಈಗ ಕಡಿಮೆ ಶಿಕ್ಷೆ ಕೊಡಿ ಅಂತೀರಲ್ಲಾ? ಮಾನಸಿಕವಾಗಿ ಆ ವರ್ಗದವರನ್ನು ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡಿದವರಿಗೆ ಶಿಕ್ಷೆ ಕೊಡುವುದು ತಪ್ಪಾ" ಎಂದು ಬೊಮ್ಮಾಯಿಯವರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ಇದು ಪಾರಂಪರಿಕವಾಗಿ ಅಥವಾ ಬಹುತೇಕವಾಗಿ ಕಾಂಗ್ರೆಸ್ ಅನ್ನೇ ಬೆಂಬಲಿಸಿ ಕೊಂಡು ಬರುತ್ತಿರುವ ಆ ಸಮುದಾಯದ ಮತಬ್ಯಾಂಕಿಗೆ ಬಿಜೆಪಿಗೆ ಕೈ ಹಾಕಿದಂತಾಯಿತು.
ಅಲ್ಪಸಂಖ್ಯಾತ ಸಮುದಾಯದ ಮತದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ
ವಿಧೇಯಕವನ್ನು ವಿರೋಧಿಸುತ್ತಾ ಬಂದಿದ್ದರಿಂದ ಅಲ್ಪಸಂಖ್ಯಾತ ಸಮುದಾಯದ ಮತದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎನ್ನುವುದು ಸ್ಪಷ್ಟ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮತಗಳನ್ನು ಕಾಂಗ್ರೆಸ್ ಇನ್ನಷ್ಟು ಭದ್ರಪಡಿಸಿಕೊಂಡಿತು. ಇದರಿಂದ ಬಿಜೆಪಿ ಕಳೆದುಕೊಳ್ಳುವುದು ಏನೂ ಇಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಯಾಕೆಂದರೆ, ಈ ಸಮುದಾಯದವರ ಬೆಂಬಲ ಇಲ್ಲದಿದರೂ ಬಿಜೆಪಿ ಮೇಲೆ ಅಷ್ಟಕಷ್ಟೇ. ಇದರಿಂದ, ಇದ್ದ ಅಲ್ಪಸ್ವಲ್ಪ ಮತವನ್ನೂ ಕಳೆದುಕೊಂಡಿದ್ದು ಜೆಡಿಎಸ್ ಎನ್ನಬಹುದಾಗಿದೆ. ಸದನದಲ್ಲಿ ಹಾಜರಿರಬೇಕು ಎನ್ನುವ ವಿಪ್ ಅನ್ನು ಕಾಂಗ್ರೆಸ್ ಜಾರಿಗೊಳಿಸಿತ್ತು
ಸೋಮವಾರದಿಂದ ಶುಕ್ರವಾರದ ವರೆಗೆ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎನ್ನುವ ವಿಪ್ ಅನ್ನು ಕಾಂಗ್ರೆಸ್ ಜಾರಿಗೊಳಿಸಿತ್ತು. ವಿಧೇಯಕದ ಮೇಲೆ ಚರ್ಚೆ, ಅದಾದ ಮೇಲೆ ಮಸೂದೆ ಅನುಮೋದನೆಗೆ ಮತಕ್ಕೆ ಹೋಗುವ ಸಾಧ್ಯತೆ ಇದ್ದಿದ್ದರಿಂದ ವಿಪ್ ಜಾರಿಗೊಳಿಸಲಾಗಿತ್ತು. ಆದರೂ, ಹದಿನೆಂಟು ಕಾಂಗ್ರೆಸ್ ಶಾಸಕರು ಗೈರಾಗಿದ್ದರು. ಇನ್ನೊಂದು ಕಡೆ, ಸಚಿವ ಸುನೀಲ್ ಕುಮಾರ್ ಅವರು ಬಿಜೆಪಿ ಸದಸ್ಯರು ಸದನದಿಂದ ಹೊರಗೆ ಹೋಗದಂತೆ ನೋಡಿಕೊಂಡರು. ವಿಧೇಯಕ ಪಾಸ್ ಆಯಿತು, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಗೈರಾಗಿದ್ದರು. ಆರ್ ಎಸ್ ಎಸ್ ಹಿಡನ್ ಎಜೆಂಡಾ ಎಂದಾಗ, ಹೌದು ನಾವೆಲ್ಲಾ RSSನವರು ಇದು ಆರ್ ಎಸ್ ಎಸ್ ಹಿಡನ್ ಎಜೆಂಡಾ ಎಂದು ಕಾಂಗ್ರೆಸ್ಸಿನವರು ಹೇಳಿದಾಗ, ಹೌದು ನಾವೆಲ್ಲಾ RSSನವರು ಎಂದು ಬಿಜೆಪಿಯವರು ಘಂಟಾಗೋಷವಾಗಿ ಹೇಳಿದರು. ಇನ್ನೊಂದು ಕಡೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಡಳಿತ ಪಕ್ಷದ ಪಿ.ರಾಜೀವ್ ಎತ್ತಿದ ಪಾಯಿಂಟ್ ಆಫ್ ಆರ್ಡರನ್ನು ಹೊಗಳಿದರು. ಇಡಿ ಚಳಿಗಾಲದ ಅಧಿವೇಶನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಒಂದೋ ನಾವು, ಇಲ್ಲವೋ ನೀವು ಎನ್ನುವ ಬಿಜೆಪಿ - ಕಾಂಗ್ರೆಸ್ ಹೊಂದಾಣಿಕೆಯಂತಿತ್ತು. ನಮ್ಮಿಬ್ಬರ ಮಧ್ಯೆ ಪ್ರಾದೇಶಿಕ ಪಕ್ಷಕ್ಕೆ ಏನು ಕೆಲಸ ಎನ್ನುವ ರೀತಿಯಲ್ಲಿತ್ತು ಅಧಿವೇಶನ.