ಅಪಘಾತದಲ್ಲಿ ಎಸ್ಐ, ಪೇದೆ ಸಾವು ಪ್ರಕರಣ: ಪರಿಹಾರ ಕೊಡದ ಸರ್ಕಾರ, ಸಹೋದ್ಯೋಗಿಗಳಿಂದಲೇ ನೆರವು

ಬೆಂಗಳೂರು: ರಾಜ್ಯ ಗೃಹ ಇಲಾಖೆ ಅಸಹಕಾರದಿಂದ ನೊಂದ ಪೊಲೀಸರು ತಮ್ಮ ವೇತನದಲ್ಲಿಯೇ ಹುತಾತ್ಮ ಪೊಲೀಸರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ 55 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಪೂರ್ವ ವಿಭಾಗದ ಅಧಿಕಾರಿ, ಸಿಬ್ಬಂದಿ ಮಾದರಿಯಾಗಿದ್ದಾರೆ.
2022ರ ಜೂ.7ರಂದು ಡ್ರಗ್ಸ್ ಪೆಡ್ಲರ್ಗಳ ಕಾರ್ಯಾಚರಣೆ ವೇಳೆ ಆಂಧ್ರಪ್ರದೇಶದ ಚಿತ್ತೂರು ಬಳಿ ರಸ್ತೆ ಅಪಘಾತ ಸಂಭವಿಸಿ ಶಿವಾಜಿನಗರ ಠಾಣೆ ಎಸ್ಐ ಅವಿನಾಶ್ ಮತ್ತು ಕಾನ್ಸ್ಟೆಬಲ್ ಅನಿಲ್ ಮುಲಿಕ್ ಮೃತಪಟ್ಟಿದ್ದರು. ಇದೇ ವೇಳೆ ಪ್ರೊಬೇಷನರಿ ಎಸ್ಐ ಎಲ್.ದೀಕ್ಷಿತ್ ಮತ್ತು ಕಾನ್ಸ್ಟೆಬಲ್ ಶರಣ ಬಸವ ಗಾಯಗೊಂಡಿದ್ದರು.
ಮೃತ ಅವಿನಾಶ್ ಮತ್ತು ಅನಿಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡುವುದಾಗಿ ಸಿಎಂ ಬಸವರಾಜ ಬೊಮ್ಮಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಆದರೆ, ಗೃಹ ಇಲಾಖೆ ಪರಿಹಾರ ಮತ್ತು ಅನುಕಂಪದ ನೌಕರಿ ಕೊಡುವಲ್ಲಿ ಮೀನಮೇಷ ಎಣಿಸುತ್ತಿದೆ.
ಈ ಕುರಿತು 'ವಿಜಯವಾಣಿ'ಯಲ್ಲಿ ವರದಿ ಪ್ರಕಟವಾದ ಮೇಲೆ ಈಚೆಗೆ ಪೊಲೀಸರ ವಿಮಾ ಪಾಲಿಸಿಯಲ್ಲಿ ಬರಬೇಕಾದ 20 ಲಕ್ಷ ರೂ.ಗಳನ್ನು ಮೃತರ ಕುಟುಂಬಕ್ಕೆ ಕೊಡಿಸಿದ್ದಾರೆ. ಜತೆಗೆ ಕುಟುಂಬ ಸದಸ್ಯರನ್ನು ಕರೆದು ಮುಷ್ಕರ, ಪ್ರತಿಭಟನೆ, ಕೋಮು ಗಲಭೆ, ಕರ್ಫ್ಯೂ, ಬಾಂಬ್ ಸ್ಫೋಟ ಮತ್ತು ಅಪರಾಧ ಪ್ರಕರಣ ತಡೆಗಟ್ಟುವ ಸಮಯದಲ್ಲಿ ಹುತಾತ್ಮರಾದವರಿಗೆ ನೀಡುವ 'ಅನುಗ್ರಹ ಪೂರ್ವಕ ಪರಿಹಾರ 30 ಲಕ್ಷ ರೂ.' ಸಹ ಕೊಡುವುದಾಗಿ ಭರವಸೆ ನೀಡಿದ್ದರು. ಅನುಕಂಪದ ನೌಕರಿಗೆ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು. ಆದರೆ, ತಿಂಗಳೇ ಕಳೆದರೂ ಅನುಗ್ರಹಪೂರ್ವಕ ಪರಿಹಾರ ಸುತ್ತೋಲೆಗೆ ತಿದ್ದುಪಡಿ ತಂದಿಲ್ಲ. ಇದರಿಂದಾಗಿ ಹಿರಿಯ ಅಧಿಕಾರಿಗಳ ವಿರುದ್ಧವೂ ಕೆಳಹಂತದ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಪೂರ್ವ ವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ವೇತನದಲ್ಲೇ ಹುತಾತ್ಮರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಪರಿಹಾರ ನೀಡಲು ಪಣತೊಟ್ಟರು. 55 ಲಕ್ಷ ರೂ. ಸಂಗ್ರಹಿಸಿ ಮೃತರಾದ ಪಿಎಸ್ಐ ಅವಿನಾಶ್, ಕಾನ್ಸ್ಟೆಬಲ್ ಅನಿಲ್, ಗಾಯಾಳು ಪಿಎಸ್ಐ ದೀಕ್ಷಿತ್ ಮತ್ತು ಕಾನ್ಸ್ಟೆಬಲ್ ಶರಣ ಬಸವ ಅವರಿಗೆ ಪರಿಹಾರ ನೀಡಿ ಮಾನವೀಯತೆ ಮೆರೆಯುವ ಜತೆಗೆ ಗೃಹ ಇಲಾಖೆಗೆ ಸಡ್ಡು ಹೊಡೆದರು.
2010ರಿಂದ ಪರಿಹಾರ ಸಿಕ್ಕಿಲ್ಲ: ಕಾನೂನು ಸುವ್ಯವಸ್ಥೆ ಕಾಪಾಡುವ ಅಂದರೆ ಮುಷ್ಕರ, ಪ್ರತಿಭಟನೆ, ಮೆರವಣಿಗೆ, ಗುಂಪು ಗಲಾಟೆ, ದೊಂಬಿ, ಕಲ್ಲು ತೂರಾಟ, ಕೋಮು ಗಲಭೆ, ಕರ್ಫ್ಯೂ, ನಿಷೇದಾಜ್ಞೆ, ಪ್ರಕೃತಿ ವಿಕೋಪ, ಬಾಂಬ್ ಪತ್ತೆ, ನಿಷ್ಕ್ರಿಯ, ನಕ್ಸಲ್, ಉಗ್ರ ವಿರುದ್ಧ ಕಾರ್ಯಾಚರಣೆ, ಬೆಂಕಿ ಅನಾಹುತ ಎಂದು ಉಲ್ಲೇಖಿಸಲಾಗಿದೆ. ಅಪರಾಧ ತಡೆಗಟ್ಟುವ ಕರ್ತವ್ಯ ಅಂದರೆ ಕಳ್ಳತನ, ಕೊಲೆ, ಅಪಹರಣ, ದರೋಡೆ ತಡೆಗಟ್ಟುವ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಆರೋಪಿಗಳ ಘರ್ಷಣೆಯಲ್ಲಿ ಗಾಯ ಮತ್ತು ಮರಣ ಹೊಂದಿ ದರೆ ಅನುಗ್ರಹಪೂರ್ವ ಪರಿಹಾರ ಸಿಗಲಿದೆ ಎಂದು 2018ರ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ತಿದ್ದುಪಡಿ ತಂದು ಪರಿಹಾರ ಕೊಡುವುದಾಗಿ ಗೃಹ ಸಚಿವಾಲಯ ಭರವಸೆ ನೀಡಿದೆ. ಇಲ್ಲಿಯವರೆಗೂ ಮಾಡಿಲ್ಲ. 2010ರಿಂದ ಹುತಾತ್ಮ ರಾದವರಿಗೆ ಪರಿಹಾರ ಕೊಡದೆ ತಿರಸ್ಕಾರ ಮಾಡಲಾಗಿದೆ.
55 ಲಕ್ಷ ರೂಪಾಯಿ ಸಂಗ್ರಹ
ಪೂರ್ವ ವಿಭಾಗದ ಕಾನ್ಸ್ಟೆಬಲ್, ಹೆಡ್ಕಾನ್ಸ್ಟೆಬಲ್ಗಳು 4 ದಿನದ, ಎಎಸ್ಐ ಮತ್ತು ಪಿಎಸ್ಐಗಳು 15 ದಿನದ ವೇತನ ಮತ್ತು ಪಿಐ, ಎಸಿಪಿ, ಡಿಸಿಪಿ 1 ತಿಂಗಳ ವೇತನವನ್ನು ಪರಿಹಾರಕ್ಕೆ ನೀಡಿದ್ದಾರೆ. ಒಟ್ಟಾರೆ 55 ಲಕ್ಷ ರೂ. ಸಂಗ್ರಹವಾಗಿತ್ತು. ಮೃತ ಅವಿನಾಶ್ ಕುಟುಂಬಕ್ಕೆ 15 ಲಕ್ಷ ರೂ., ಅನಿಲ್ ಮುಲಿಕ್ ಕುಟುಂಬಕ್ಕೆ -ಠಿ;25 ಲಕ್ಷ ನೀಡಲಾಗಿದೆ. ಗಾಯಗೊಂಡಿದ್ದ ಪಿಎಸ್ಐ ದೀಕ್ಷಿತ್ಗೆ 5 ಲಕ್ಷ ರೂ. ಮತ್ತು ಕಾನ್ಸ್ಟೆಬಲ್ಗೆ ಶರಣ ಬಸವಗೆ 10 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ಕೊಡಿ
ಅನುಕಂಪದ ನೌಕರಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ ಮಾಡಲಾಗಿದೆ. ಆದರೆ, ಕಾನ್ಸ್ಟೆಬಲ್ ಅನಿಲ್ ಮುಲಿಕ್ ಕುಟುಂಬದಲ್ಲಿ ಎಸ್ಎಸ್ಎಲ್ಸಿ ಪಾಸ್ ಮಾಡಿದವರು ಯಾರು ಇಲ್ಲ. ಅನಿಲ್ ಸಹೋದರ 8ನೇ ತರಗತಿ ಓದಿದ್ದು, ಸಿ ಗ್ರೂಪ್ ನೌಕರಿ ಆದರೂ ಕೊಡಬೇಕೆಂದು ಪೊಲೀಸ್ ವಲಯದಿಂದ ಒತ್ತಾಯ ಕೇಳಿಬಂದಿದೆ.