ಡಾ.ರಾಧಾಕೃಷ್ಣನ್ ಅವರು ಕೂರುತ್ತಿದ್ದ ಕೊಠಡಿ ಹಾಳಾಗಿರುವುದಕ್ಕೆ ಅಸಮಾಧಾನ

ಡಾ.ರಾಧಾಕೃಷ್ಣನ್ ಅವರು ಕೂರುತ್ತಿದ್ದ ಕೊಠಡಿ ಹಾಳಾಗಿರುವುದಕ್ಕೆ ಅಸಮಾಧಾನ

ಮೈಸೂರು: ಅಧ್ಯಾಪಕ ವೃತ್ತಿ ನಂತರ ರಾಷ್ಟ್ರಪತಿ ಹುದ್ದೆಗೇರಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಕುಳಿತು ಪಾಠ ಮಾಡುತ್ತಿದ್ದ ಮಹಾರಾಜ ಕಾಲೇಜಿನ ತತ್ವಶಾಸ್ತ್ರ ವಿಭಾಗದ ಕೊಠಡಿ ಸಂಪೂರ್ಣ ಹಾಳಾಗಿರುವ ಬಗ್ಗೆ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ಪಾರಂಪರಿಕ ಕಟ್ಟಡಗಳ ಸಮೀಕ್ಷೆ ಮುಂದುವರಿಸಿರುವ ಸಮಿತಿ, ಶನಿವಾರ ಮಹಾರಾಜ ಕಾಲೇಜಿಗೆ ಭೇಟಿ ನೀಡಿತ್ತು. ಆದರೆ, ಸಮೀಕ್ಷೆ ಪೂರ್ಣಗೊಂಡಿರಲಿಲ್ಲ. ಸೋಮವಾರವೂ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ ಸಮಿತಿ ಸದಸ್ಯರು ಸಮೀಕ್ಷೆ ಪೂರ್ಣಗೊಳಿಸಿದರು.
೧೮೮೯ರಲ್ಲಿ ನಿರ್ಮಿಸಲಾಗಿರುವ ಮಹಾರಾಜ ಕಾಲೇಜು ಕಟ್ಟಡದ ನಿರ್ವಹಣೆ ಸರಿ ಇಲ್ಲ. ಮಳೆ ನೀರು ಸೋರಿಕೆಯಿಂದ ಗೋಡೆಗಳು ವಸ್ತಿ ಹಿಡಿಯುತ್ತಿವೆ. ಮುಖ್ಯವಾಗಿ ಡಾ.ರಾಧಾಕೃಷ್ಣನ್ ಅವರು ಕುಳಿತು ಪಾಠ ಮಾಡುತ್ತಿದ್ದ ತತ್ವಶಾಸ್ತ್ರ ಅಧ್ಯಯನ ವಿಭಾಗದ ಕೊಠಡಿ ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದು, ಆ ಕೊಠಡಿಯ ಪೀಠೋಪಕರಣಗಳೆಲ್ಲ ಹಾಳಾಗಿವೆ. ಡಾ.ರಾಧಾಕೃಷ್ಣನ್ ಅವರ ಮನೆಯನ್ನು ಸಂರಕ್ಷಣೆ ಮಾಡಿದಂತೆ, ಅವರು ಪಾಠ ಮಾಡುತ್ತಿದ್ದ ಕಾಲೇಜಿನ ಕೊಠಡಿಯನ್ನೂ ಸಂರಕ್ಷಣೆ ಮಾಡಬೇಕಾದದ್ದು ಕರ್ತವ್ಯ ಎನ್ನುತ್ತಾರೆ ಸಮಿತಿ ಸದಸ್ಯರಾದ ಪ್ರೊ.ಎಸ್.ಎನ್.ರಂಗರಾಜು ಅವರು.
ಪುರಾತತ್ವ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಮೈಸೂರು ಮಹಾನಗರಪಾಲಿಕೆ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರಾದ ಎಸ್.ರಮ್ಯಾ, ಸಹಾಯಕ ಇಂಜಿನಿಯರ್ ಆರ್.ಪವಿತ್ರ ಹಾಜರಿದ್ದರು.