ಚಿಕ್ಕಪೇಟೆ ವಿಭಾಗದ ವಾರ್ಡ್ 118-119ರಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ 10.5 ಕೋಟಿ ವಂಚನೆ

ಬೆಂಗಳೂರು, ಡಿ.23- ಚಿಕ್ಕಪೇಟೆ ವಿಭಾಗದ ವಾರ್ಡ್ ಸಂಖ್ಯೆ 118 ಮತ್ತು 119ರ ತ್ಯಾಜ್ಯ ವಿಲೇವಾರಿ ಹಣ ಬಿಡುಗಡೆ ಕಾರ್ಯದಲ್ಲಿ ಸುಮಾರು 10.5 ಕೋಟಿಯಷ್ಟು ಬೃಹತ್ ಮೊತ್ತದ ವಂಚನೆ ಎಸಗಲಾಗಿದೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಈ ಸಂಬಂಧ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿತ ದಾಖಲೆಗಳನ್ನು ಬಿಡುಗಡೆ ಮಾಡಿರುವ ಅವರು, ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿರುವ ಹಣವನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ನರಸಿಂಹ ರಾಮಯ್ಯ, ಚಿಕ್ಕಪೇಟೆ ವಾರ್ಡ್‍ನ ಆರೋಗ್ಯ ಪರಿವೀಕ್ಷಕರಾದ ವೀರಯ್ಯ ಮತ್ತು ಸುರೇಶ್ ವಿರುದ್ಧ ಹಾಗೂ ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡದೆ ಕಳೆದ 10 ತಿಂಗಳಿನಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವ ದಕ್ಷಿಣ ವಲಯದ ಅೀಧಿಕ್ಷಕ ಅಭಿಯಂತರರಾದ ಮಂಜುನಾಥ್‍ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಗುತ್ತಿಗೆದಾರರಾದ ಎಸ್‍ಆರ್‍ಪಿ ಕಾರ್ಪೊರೇಷನ್ ಸಂಸ್ಥೆಯ ಈ.ರಮಣರೆಡ್ಡಿ ಹಾಗೂ ಪ್ರಕೃತಿ ಎಂಟರ್‍ಪ್ರೈಸಸ್ ಮಾಲೀಕರಾದ ವಿದ್ಯನಾಥನ್ ರೆಡ್ಡಿ ವಿರುದ್ಧವೂ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಎಫ್‍ನಲ್ಲಿ ದೂರು ದಾಖಲಿಸಿದ್ದಾರೆ.
ಈ ಎರಡೂ ವಾರ್ಡ್‍ಗಳಿಂದ ಪಾಲಿಕೆಗೆ ಕಳೆದ 40 ತಿಂಗಳ ಅವಯಲ್ಲಿ ಸುಮಾರು 10.5 ಕೋಟಿಯಷ್ಟು ಅಧಿಕ ಮೊತ್ತ ವಂಚನೆಯಾಗಿರುತ್ತದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.ಹೈಕೋರ್ಟ್ ನಿರ್ದೇಶನದಂತೆ 2018ರ ಜನವರಿಯಿಂದ ಪೌರ ಕಾರ್ಮಿಕರ ಹಣ ಪಾವತಿಯನ್ನು ನೇರವಾಗಿ ಬಿಬಿಎಂಪಿಯೇ ಮಾಡುತ್ತಿದೆ. ಕಂಪ್ಯಾಕ್ಟರ್ ಮತ್ತು ಟಿಪ್ಪರ್ ಆಟೋರಿಕ್ಷಾಗಳ ಸರಬರಾಜು ಕಾರ್ಯವನ್ನು ಹಾಗೂ ಇದಕ್ಕೆ ಬೇಕಿರುವ ಚಾಲಕರು, ಸಹಾಯಕರ ಪೂರೈಕೆ ಸರಬರಾಜು ಕಾರ್ಯವನ್ನು ಗುತ್ತಿಗೆದಾರರು ಮಾಡಬೇಕು.
ಈ ಎರಡೂ ವಾರ್ಡ್‍ಗಳಲ್ಲಿ ಎಸ್‍ಆರ್‍ಪಿ ಕಾಪೆರ್ರೇಷನ್ ಮತ್ತು ಪ್ರಕೃತಿ ಎಂಟರ್‍ಪ್ರೈಸಸ್‍ನವರು ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಗುತ್ತಿಗೆ ಪಡೆದಿದ್ದು, ವಾರ್ಡ್ ನಂ.118ರಲ್ಲಿ 21 ಟಿಪ್ಪರ್ ಆಟೋ, ವಾರ್ಡ್ ಸಂಖ್ಯೆ 119ರಲ್ಲಿ 34 ಟಿಪ್ಪರ್ ಆಟೋಗಳನ್ನು ಬಳಸಿಕೊಂಡು ತ್ಯಾಜ್ಯ ವಿಲೇವಾರಿ ಕಾರ್ಯ ಮಾಡುತ್ತಿದ್ದೇವೆ ಎಂದು ತಪ್ಪು ಮಾಹಿತಿ ನೀಡಿ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಿರುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ.
ಕಳೆದ ಜ.18ರಿಂದ ಈವರೆಗೆ 46 ತಿಂಗಳ ಅವಯಲ್ಲಿ ಈಗಾಗಲೇ 40 ತಿಂಗಳ ಹಣವನ್ನು ಪಾಲಿಕೆಯು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಹಣವೂ ಪಾವತಿಯಾಗಿದೆ. ಪ್ರತಿ ತಿಂಗಳು 33ಲಕ್ಷದಷ್ಟು ಹಣ ನಿರಂತರವಾಗಿ ಪಾವತಿಯಾಗಿರುತ್ತದೆ. ಈ ಇಬ್ಬರೂ ಗುತ್ತಿಗೆದಾರರು ರಾಜಕೀಯವಾಗಿ ಅತ್ಯಂತ ಪ್ರಭಾವಶಾಲಿಗಳಾಗಿರುವುದರಿಂದ ಪಾಲಿಕೆಗೆ ಮಾಡುತ್ತಿರುವ ವಂಚನೆ ಕಾರ್ಯಗಳ ಬಗ್ಗೆ ಯಾವೊಬ್ಬ ಅಕಾರಿಯೂ ಚಕಾರವೆತ್ತುತ್ತಿಲ್ಲ.
ಅಧಿಕಾರಿಗಳಿಗೂ ಕೂಡ ಅಕ್ರಮವಾಗಿ ಸಾಕಷ್ಟು ಲಾಭವಾಗುತ್ತಿದೆ ಎಂದು ಆರೋಪಿಸಿರುವ ಎನ್.ಆರ್.ರಮೇಶ್ ಇಷ್ಟು ದೊಡ್ಡಮಟ್ಟದ ವಂಚನೆ ಪ್ರಮಾಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿರುವ ಹಣವನ್ನು ವಾಪಸ್ ಪಡೆಯಬೇಕು. ಈ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ..