ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ; ದೇವಾಲಯಗಳು ಬಂದ್

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿದ್ದು, ದೇವರ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಇಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ನಿಮಿಷಾಂಭ ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯಗಳು, ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇಗುಲ ಬಂದ್ ಆಗಲಿವೆ.
ನಿಮಿಷಾಂಭ ದೇವಾಲಯ ಮಧ್ಯಾಹ್ನ 12 ಗಂಟೆಗೆ ಬಂದ್ ಆಗಲಿದ್ದು, ಸಂಜೆ 7ಗಂಟೆಯವರೆಗೂ ದೇವಾಲಯ ಬಾಗಿಲು ಮುಚ್ಚಲಿದೆ. ಬಳಿಕ ಗ್ರಹಣ ಮೋಕ್ಷದ ಬಳಿಕ ದೇವಾಲಯ ಬಾಗಿಲು ತೆರೆಯಲಿದ್ದು, ಶುದ್ಧಿಕಾರ್ಯ ನಡೆದು ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.ಇನ್ನು ಬೆಂಗಳೂರಿನ ಕಾಡುಮಲ್ಲೇಶ್ವರ ದೇವಾಲಯವೂ ಇಂದು ಬಂದ್ ಆಗಲಿದೆ. ಬೆಳಿಗ್ಗೆ 10:30ವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿದ್ದು, ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. 10:30ರ ಬಳಿಕ ಸಂಜೆ 6:30ರವರೆಗೂ ಗ್ರಹಣ ಮೋಕ್ಷ ಕಾಲದವರೆಗೂ ದೇವಾಲಯದ ಬಾಗಿಲು ಬಂದ್ ಆಗಲಿದೆ. ನಂತರದಲ್ಲಿ ಶುದ್ಧಿಕಾರ್ಯ ನಡೆದು ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.