ಸಾರಾ ಮಹೇಶ್-ರೋಹಿಣಿ ಸಿಂಧೂರಿ ರಾಜಿ ಹಿಂದಿನ ರಹಸ್ಯ ಬಯಲು: ತಪ್ಪನ್ನು ಒಪ್ಪಿಕೊಂಡ ಐಎಎಸ್ ಅಧಿಕಾರಿ

ಬೆಂಗಳೂರು: ಶಾಸಕ ಸಾ.ರಾ. ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ನಡುವಿನ ಜಟಾಪಟಿಯನ್ನು ಸಂಧಾನದ ಮೂಲಕ ಬಗೆಹರಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಾದ ಬಳಿಕ ಸಾ.ರಾ. ಮಹೇಶ್ ಕೂಡ ಪ್ರತಿಕ್ರಿಯೆ ನೀಡಿದ್ದರು.
ರೋಹಿಣಿ ಅವರು ಶಾಸಕ ಸಾರಾ ಮಹೇಶ್ ಬಳಿ ವಿಷಾದ ವ್ಯಕ್ತಪಡಿಸಲು ಹೋಗಿದ್ದರು. ತಪ್ಪು ಗ್ರಹಿಕೆಯಿಂದ ನಿಮ್ಮ ಮೇಲೆ ಆರೋಪ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿ, ರಾಜಿ ಮಾಡಿಕೊಳ್ಳಲು ಹೋಗಿದ್ದರು. ಆದರೆ, ರಾಜಿಗೆ ಸಾರಾ ಮಹೇಶ್ ನಿರಾಕರಿಸಿದ್ದರು. ವಿಷಾದವನ್ನು ಸಾರ್ವಜನಿಕವಾಗಿ ತಿಳಿಸಿ, ಒಂದು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಸ್ಪಷ್ಟನೆ ನೀಡಿ ಎಂದು ಸಾರಾ ಮಹೇಶ್ ಹೇಳಿದ್ದರು.
ಇದೀಗ ಪತ್ರಿಕಾ ಪ್ರಕಟಣೆಗೆ ಸಿದ್ದವಾಗಿದ್ದ ಪ್ರತಿ ದಿಗ್ವಿಜಯ ನ್ಯೂಸ್ಗೆ ಲಭ್ಯವಾಗಿದೆ. ಪತ್ರಿಕಾ ಪ್ರಕಟಣೆ ಕೊಡಲು ರೋಹಿಣಿ ಅವರು ಸಮಯ ಕೇಳಿದ್ದರು. ಈ ಮಧ್ಯೆ ರಾಜಿ ಪಂಚಾಯಿತಿ ಸುದ್ದಿ ಎಲ್ಲೆಡೆ ಹರಿದಾಡಿತು.
ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
2021ರ ಜೂನ್ 14 ರಂದು ರೋಹಿಣಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದ ವರದಿಯ ಬಗ್ಗೆ ರೋಹಿಣಿ ಅವರು ಸ್ಪಷ್ಟನೆ ನೀಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಾ.ರಾ.ಮಹೇಶ್ರವರ ಪತ್ನಿಯಾದ ಶ್ರೀಮತಿ ಅನಿತಾ ಮಹೇಶ್ ಅವರ ಹೆಸರಿನಲ್ಲಿ ಮೈಸೂರು ತಾಲೂಕು, ಕಸಬಾ ಹೋಬಳಿ, ದಟ್ಟಗಳ್ಳಿ ಗ್ರಾಮದ ಸರ್ವೆ ನಂ.130/2 ರಲ್ಲಿ 2 ಎಕರೆ 15 ಗುಂಟೆ ಜಮೀನು ಇದ್ದು, ಸದರಿ ಸ್ವತ್ತು ಇಡುವಳಿ ಜಮೀನಾಗಿದ್ದು, ಗೋಮಾಳ ಆಗಿರುವುದಿಲ್ಲ ಮತ್ತು ಯಾವುದೇ ಖರಾಬು ದಾಖಲಾಗಿರುವುದಿಲ್ಲ. ಸದರಿ ಸ್ವತ್ತು ವಾಣಿಜ್ಯ ಉದ್ದೇಶಕ್ಕಾಗಿ ಅನ್ಯಕ್ರಾಂತವಾಗಿರುತ್ತದೆ ಮತ್ತು ಕಲ್ಯಾಣ ಮಂಟಪ ಚೌಳ್ಳಿಯು ಗ್ರಾಮ ನಕ್ಷೆಯಲ್ಲಿ ಕಂಡಂತಹ ಹಳ್ಳದ ಮೇಲೆ ನಿರ್ಮಿತವಾಗಿರುವುದಿಲ್ಲ ಹಾಗೂ ಹಳ್ಳದ ಪ್ರದೇಶವನ್ನು ಒತ್ತುವರಿ ಮಾಡಿ ನಿರ್ಮಿಸಿರುವುದು ಕಂಡುಬರುವುದಿಲ್ಲ. ಹಳ್ಳ ಪ್ರದೇಶದಿಂದ ಕಲ್ಯಾಣ ಮಂಟಪ/ಚೌಲ್ವಿಯು ಕೆಲವು ಕಡೆ 74,72,73 ಮೀಟರ್‌ಗಳ ಅ೦ತರದಲ್ಲಿ ನಿರ್ಮಾಣವಾಗಿರುವುದು ಅಳತೆ ಸಂದರ್ಭದಲ್ಲಿ ಕಂಡುಬಂದಿರುತ್ತದೆ ಎಂದು ಈ ಹಿಂದಿನ ವರದಿಯಲ್ಲಿ ತಿಳಿಸಲಾಗಿದೆ. ನಾನು ದಿಶಾಂಕ್ ನಕ್ಷೆ ನೋಡಿ ತಪ್ಪು ಮಾಹಿತಿ ಗ್ರಹಿಸಿ ರಾಜಕಾಲುವೆ ಒತ್ತುವರಿ ಹಾಗೂ ಗೋಮಾಳ ಜಮೀನು ಎಂದು ಈ ಹಿಂದೆ ಹೇಳಿಕೆ ನೀಡಿದ್ದೆ. ಹೀಗಾಗಿ ಸದರಿ ಹೇಳಿಕೆಗೆ ವಿಷಾದಿಸುತ್ತೇನೆ ಹಾಗೂ ನನ್ನ ವರ್ಗಾವಣೆ ಯಾವುದೇ ಭೂ ವಿವಾದದಿಂದ ಆಗಿಲ್ಲ. ನನ್ನ ವರ್ಗಾವಣೆಯು ಸರ್ಕಾರದ ನಿಯಮಾನುಸಾರವಾಗಿರುತ್ತದೆ ಎಂದು ರೋಹಿಣಿ ಅವರು ತಿಳಿಸಿದ್ದಾರೆ.